ಗೋಣಿಕೊಪ್ಪ: ವಿಶು ಆಚರಣೆ ಸಮಾನತೆಯ ಸಂಕೇತವಾಗಿದೆ ಎಂದು ಕೊಡಗು ಹಿಂದು ಮಲಯಾಳಿ ಸಮಾಜದ ಉಪಾಧ್ಯಕ್ಷ ಎಂ.ಎಸ್.ಸುಬ್ರಮಣಿ ಹೇಳಿದರು.
ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಮ್ಮ ದೇಶ ನಮ್ಮ ಸಂಸ್ಕೃತಿ ಕಾರ್ಯಕ್ರಮದಡಿ ಶನಿವಾರ ಮೈಸೂರಮ್ಮ ನಗರದ ಕೆ.ಎನ್.ಅಶೋಕ್ ನಿವಾಸದಲ್ಲಿ ಆಯೋಜಿಸಿದ್ದ ವಿಶು ಹಬ್ಬ ಆಚರಣೆಯಲ್ಲಿ ಹಬ್ಬದ ಬಗ್ಗೆ ಮಾಹಿತಿ ಹಂಚಿಕೊಂಡರು. ವಿಶು ಎಂಬುವುದು ಸಮಾನತೆಯ ಸಂಕೇತವಾಗಿದೆ.
ಹೊಂಗಿರಣದ ಬಣ್ಣ ಹೊಂದಿರುವ ಪೊನ್ನ ಹೂ ಪ್ರಕೃತಿಯ ಕೊಡುಗೆಯಾಗಿದ್ದು, ಮಲಯಾಳಿ ಸಮುದಾಯದ ವಿಶೇಷವಾಗಿ ಆಚರಣೆಯಾಗಿದೆ. ಪ್ರಕೃತಿಯಲ್ಲಿ ಕೂಡ ಬದಲಾವಣೆ ಕಾಣಬಹುದಾಗಿದ್ದು, ವಿಶು ದಿನದಲ್ಲಿ 12 ಗಂಟೆ ಹಗಲು, 12 ಗಂಟೆ ರಾತ್ರಿಯನ್ನು ಕಾಣಬಹುದಾಗಿದೆ. ಸನಾತನ ಧರ್ಮದಲ್ಲಿ ವಿಶಿಷ್ಟ ಸಂಸ್ಕೃತಿ ಹೊಂದಿದ್ದು, ಕೃಷಿಗೆ ಪೂರಕವಾಗಿದೆ. ತಮಿಳುನಾಡು, ಪಂಜಾಬ್, ಅಸ್ಸಾಂನಲ್ಲಿ ಆಚರಣೆ ಇದ್ದು, ಹೊಸ ವರ್ಷವಾಗಿದೆ. ವಿಶು ಪರ್ವದಲ್ಲಿ ಒಳ್ಳೆಯದನ್ನು ಪ್ರಾರ್ಥಿಸುತ್ತೇವೆ. ಯುವ ಪೀಳಿಗೆ ಸಂಪ್ರದಾಯ ಉಳಿಸಿಕೊಳ್ಳಲು ಮುಂದಾಗಬೇಕಿದೆ. ಉಣ್ಣಿ ಅಪ್ಪಂ, ನೈ ಅಪ್ಪಂ, ಪಾಯಸ, ಇಂಜಿಪುಳಿ, ಅವಿಲ್ ವಿಶೇಷ ಭೋಜನ ಮಾಡುತ್ತೇವೆ ಎಂದರು.
ಮುಖಂಡ ಕೆ.ಎನ್.ಅಶೋಕ್ ಮಾತನಾಡಿ, ವಿಶು ಹಬ್ಬ ಕುಟುಂಬದಲ್ಲಿ ಸಂಭ್ರಮಕ್ಕೆ ಕಾರಣವಾಗಲಿದೆ. ಹಿರಿಯರು ರೂಪಿಸಿದ ಆಚರಣೆಯನ್ನು ನಾವು ಮುಂದಿನ ಪೀಳಿಗೆಗೆ ಆಚರಣೆ ಮೂಲಕ ಮಾರ್ಗದರ್ಶನ ನೀಡುತ್ತಿದ್ದೇವೆ. ಹೊಸ ವರ್ಷವಾಗಿ ಚೈತನ್ಯದಿಂದ ಪಾಲ್ಗೊಳ್ಳುತ್ತೇವೆ. ಹಿರಿಯರಿಗೆ ಗೌರವ ಕೊಡುವುದು ಹಬ್ಬದ ವಿಶೇಷತೆಯಲ್ಲೊಂದು ಎಂದರು.
ಆಚರಣೆ: ಕಣಿ ಎಂಬುವುದು ಆಚರಣೆಯ ವಿಶೇಷತೆಯಾಗಿದೆ. ಮನೆಯಲ್ಲಿ ಶ್ರೀಕೃಷ್ಣನ ವಿಗ್ರಹವಿಟ್ಟು ತುಳಸಿ ಮಾಲೆ, ಹೂ, ಹಣ್ಣು ಹಂಪಲು ಇಟ್ಟು ಪೂಜಿಸಲಾಗುತ್ತದೆ. ಗಣಪತಿಗೆ ಇಷ್ಟವಾದ ಹಲಸು, ಕೃಷ್ಣನಿಗೆ ಇಷ್ಟವಾದ ಕದಣಿ ಬಾಳೆ, ನವಿಲು ಗರಿ, ಬೆಳ್ಳರಿ, ಮರುಗನಿಗೆ ಇಷ್ಟವಾದ ಮಾವಿನ ಹಣ್ಣು, ತೆಂಗಿನಕಾಯಿ ಇಟ್ಟು, ಬಿಳಿ ಬಟ್ಟೆಯಲ್ಲಿ ಎಲೆ ಅಡಕೆ, ನಾಣ್ಯ, ಆಭರಣ ಇಡಲಾಗುತ್ತದೆ. ದೀಪ ಹಚ್ಚಿ ಹಿರಿಯರು ಪೂಜಿಸುತ್ತಾರೆ. ಹಬ್ಬದ ದಿನ ಮನೆಯವರು ಎದ್ದು ಬಂದು ಮೊದಲು ಕಣ್ಣುಗಳನ್ನು ಮುಚ್ಚಿಕೊಂಡು ಬಂದು ಕಣಿ ನೋಡುತ್ತಾರೆ.
ಹಿರಿಯರ ಕಾಲಿಗೆ ನಮಸ್ಕರಿಸಿ ವಿಶು ಕೈನೀಟಂ ಎಂದು ಹಣ, ಉಡುಗೊರೆಯನ್ನು ನೀಡಲಾಗುತ್ತದೆ. ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಗಂಧದ ತಿಲಕ ಇಟ್ಟು ಪೂಜಿಸುತ್ತಾರೆ.
ಮಲಯಾಳಿ ಸಮುದಾಯದ ಬೇಬಿ, ಕೆ.ಎ.ಅಭಿಲಾಷ್, ಶಿಲ್ಪ, ವಿಹಾನ್, ನಿಖಿಲ್, ನಿತಿಶ್, ರತಿ ಪುರುಷೋತ್ತಮ್, ಕಾರ್ತಿಕ್, ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ವಿ.ವಿ.ಅರುಣ್‌ಕುಮಾರ್, ಎನ್.ಎನ್.ದಿನೇಶ್, ಮಂಡೇಡ ಅಶೋಕ್, ದರ್ಶನ್ ದೇವಯ್ಯ, ಸಿಂಗಿ ಸತೀಶ್ ಇದ್ದರು.