ಜಿಲ್ಲೆ

ವಿಶಿಷ್ಟ ಕಾರ್ಯಕ್ರಮಗಳಿಗೆ ಒತ್ತು

ಕಲಬುರಗಿ: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘಕ್ಕೆ ಸರ್ಕಾರ ನೀಡಿರುವ 500 ಕೋಟಿ ರೂ.ಗಳಲ್ಲಿ ಈ ಭಾಗದ ಪ್ರಗತಿಗೆ ನಾಂದಿ ಹಾಡುವಂಥ ವಿಶಿಷ್ಟ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ತಿಂಗಳಲ್ಲಿ ಪ್ರಸ್ತಾವನೆ ರೂಪಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಸಂಘದ ಅಧ್ಯಕ್ಷ ಡಾ.ಬಸವರಾಜ ಪಾಟೀಲ್ ಸೇಡಂ ತಿಳಿಸಿದರು.
ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂಘದ ಕೇಂದ್ರ ಕಚೇರಿ ಉದ್ಘಾಟನಾ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕೃತವಾಗಿ ಸಂಘದ ಕಾರ್ಯಚಟುವಟಿಕೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಸಂಘದ ಕಾಯಂ ಕಾರ್ಯಕಾರಿ ಸದಸ್ಯರ ಮತ್ತು ವಿಶೇಷ ತಜ್ಞರ ಸಲಹಾ ಸಮಿತಿ ಅಭಿಪ್ರಾಯದಂತೆ ಯೋಜನೆಗಳನ್ನು ರೂಪಿಸಿ ಸರ್ಕಾರದಿಂದ ಅನುಮೋದನೆ ಪಡೆದು ಆರಂಭಿಸಲಾಗುವುದು. ನಾಲ್ಕು ತಿಂಗಳ ಬಳಿಕ ಸಂಘದ ಜನಕಲ್ಯಾಣ ಕೆಲಸಗಳು ಜನರ ಕಣ್ಣಿಗೆ ಕಾಣುತ್ತವೆ. ಅಲ್ಲದೆ ಬದಲಾವಣೆ ಗೋಚರಿಸಲಿದೆ ಎಂದರು.
ಗ್ರಾಮಕ್ಕೊಬ್ಬ ಪ್ರತಿನಿಧಿ: ಸಂಘದ ಕಾರ್ಯಚಟುವಟಿಕೆಗೆ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಹಳ್ಳಿಗೊಬ್ಬರು ಪ್ರತಿನಿಧಿ ಇರಲಿದ್ದಾರೆ. ಮೇಲುಸ್ತುವಾರಿ ನೋಡಿಕೊಳ್ಳಲು ತಾಲೂಕು ಮತ್ತು ಜಿಲ್ಲೆಯಲ್ಲಿ ಪ್ರತಿನಿಧಿಗಳು ಇರುತ್ತಾರೆ. ಗ್ರಾಪಂಗೊಂದು ತರಬೇತಿ ಮತ್ತು ಸಂಸ್ಕಾರ ಕೇಂದ್ರ ಆರಂಭಿಸಲಾಗುವುದು ಎಂದರು.
ಮಹಿಳೆಯರನ್ನು ನೇಮಿಸಿ ಹೊಲಿಗೆ ಇತ್ಯಾದಿ ತರಬೇತಿ ನೀಡಲಾಗುವುದು. ಪಟ್ಟಣ ಪಂಚಾಯಿತಿ, ಪುರಸಭೆಗಳಲ್ಲಿ ಎರಡು ಕೇಂದ್ರ, ನಗರಸಭೆ ಇದ್ದಲ್ಲಿ ಮೂರು ಹಾಗೂ ಮಹಾನಗರ ಪಾಲಿಕೆಯಲ್ಲಿ ವಾರ್ಡ್​ಗೊಂದು ಕೇಂದ್ರ ಇರಲಿದೆ ಎಂದು ಸೇಡಂ ಮಾಹಿತಿ ನೀಡಿದರು.
ಸಂಘದ ಕಾರ್ಯದರ್ಶಿ ಭೀಮಾಶಂಕರ ತೆಗ್ಗಳ್ಳಿ ಇತರರಿದ್ದರು.

ಮಾರ್ಗದರ್ಶಕರ ಸಮಿತಿಗೆ ಗವಿಸಿದ್ದೇಶ್ವರ ಶ್ರೀ
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವಿಶೇಷ ಮಾರ್ಗದರ್ಶಕ ಸಮಿತಿಗೆ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ, ನಿವೃತ್ತ ಐಎಎಸ್ ಅಧಿಕಾರಿ ಮದನಗೋಪಾಲ, ಕೃಷಿ ತಜ್ಞ ಡಾ.ಎಸ್.ಎ. ಪಾಟೀಲ್ ಬಿರಾಳ, ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಹಾಗೂ ವಿಜಯಪುರದ ಚಾಣಕ್ಯ ಅಕಾಡೆಮಿ ಎನ್.ಎಂ. ಬಿರಾದಾರ ಅವರನ್ನು ಆಯ್ಕೆ ಮಾಡಲಾಗಿದೆ. ಇವರೆಲ್ಲರೂ ಸಂಘದ ಚಟುವಟಿಕೆಗೆ ಸಲಹೆ ನೀಡುವರು. 15 ಸದಸ್ಯರ ಆಡಳಿತ ಮಂಡಳಿಯಲ್ಲಿ ಎಲ್ಲ ಜಿಲ್ಲೆಗಳ ಡಿಸಿ, ಸಿಇಒ, ಅರಣ್ಯ ಅಧಿಕಾರಿಗಳ ಜತೆಗೆ ಕೆಲ ಅಧಿಕಾರೇತರ ಸದಸ್ಯರೂ ಇರಲಿದ್ದಾರೆ ಎಂದು ಸೇಡಂ ತಿಳಿಸಿದರು. ಕೆಕೆಆರ್ಡಿಬಿಗೆ ಈ ಸಂಘ ಪರ್ಯಾಯವಲ್ಲ, ಅದು ಮೂಲಸೌಕರ್ಯ ಸೃಷ್ಟಿಸುವ ಕೆಲಸ ಮಾಡುತ್ತದೆ. ಸಂಘವು ಮಾನವ ಸಂಪನ್ಮೂಲ ಪ್ರಗತಿ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಲಿದೆ ಹೊರತು, ಕಟ್ಟಡಗಳನ್ನು ನಿರ್ಮಿಸಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ಕಾರ ನೀಡಿರುವ 500 ಕೋಟಿ ರೂ.ಗಳಲ್ಲಿ ಸಾವಿರ ಕೋಟಿ ರೂ.ಗಳಷ್ಟು ಪರಿಣಾಮ ತೋರುವಂತೆ ಕೆಲಸಗಳನ್ನು ಮಾಡಲಾಗುವುದು. ಹಳ್ಳಿಗಳತ್ತ ಜನರನ್ನು ಸೆಳೆಯಲು ಆಕರ್ಷಣೆ ಕೇಂದ್ರಗಳಾಗಿ ಪರಿವರ್ತಿಸಲಾಗುವುದು. ಕೃಷಿಯತ್ತ ಆಸಕ್ತಿ ಬೆಳೆಸುವುದರ ಜತೆಗೆ ರೈತ ಪದ ಪರಿಪೂರ್ಣಗೊಳ್ಳಲು ಹಸು, ಎಮ್ಮೆ, ಮೇಕೆ ಸಾಕಣೆ ಕಡ್ಡಾಯವಾಗಿ ಮಾಡುವಂಥ ಕೆಲಸಗಳು ನಡೆಯಲಿವೆ.
| ಡಾ.ಬಸವರಾಜ ಪಾಟೀಲ್ ಸೇಡಂ
ಅಧ್ಯಕ್ಷ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ