ಚಿತ್ರದುರ್ಗ: ವೈದ್ಯಕೀಯ ಕಾಲೇಜು ನಗರಸಭೆ ವ್ಯಾಪ್ತಿಯ ವಿಶಾಲ ಸ್ಥಳದಲ್ಲೇ ನಿರ್ಮಿಸಬೇಕು. ಯಾವ ಕಾರಣಕ್ಕೂ ಜಿಲ್ಲಾಸ್ಪತ್ರೆ ಆವರಣ ಸೂಕ್ತವಲ್ಲ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರನ್ನು ಶೀಘ್ರ ಭೇಟಿಯಾಗಿ ಗಮನ ಸೆಳೆಯಲಾಗುವುದು ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಅಧ್ಯಕ್ಷ ಡಾ.ಪಿ.ಟಿ.ವಿಜಯಕುಮಾರ್ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೈದ್ಯಕೀಯ ಕಾಲೇಜು ನಿರ್ಮಾಣ ಸ್ವಾಗತಾರ್ಹ, ಸಂತೋಷದ ಸಂಗತಿ. ಮಧ್ಯ ಕರ್ನಾಟಕ ಭಾಗ ಚಿತ್ರದುರ್ಗ ಜಿಲ್ಲೆಯ ಜನರ ಬಹುದಿನದ ಕನಸು. ಆದರೆ, ಕನಿಷ್ಠ 100 ವರ್ಷದ ದೂರದೃಷ್ಟಿ ಇಟ್ಟುಕೊಂಡು ಮುಂದಿನ ಪೀಳಿಗೆಗೂ ಅನುಕೂಲವಾಗುವಂತೆ ಸುಸಜ್ಜಿತ, ಅತ್ಯಾಧುನಿಕವಾಗಿ ನಿರ್ಮಿಸಲಿ. ತರಾತುರಿಯ ತೀರ್ಮಾನ ದುರಂತದ ಸಂಗತಿ ಆಗಲಿದೆ ಎಂದು ಎಚ್ಚರಿಸಿದರು.
ಜಿಲ್ಲಾಸ್ಪತ್ರೆಗೆ ನಿತ್ಯ 6 ತಾಲೂಕುಗಳ ವಿವಿಧ ಹಳ್ಳಿಗಳಿಂದ ಸಾವಿರಾರು ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಹೆಚ್ಚಿನ ಜನಸಂದಣಿ, ವಾಹನಗಳ ಸಂಚಾರದಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗೆ ತೊಂದರೆಯಾಗಲಿದೆ. ಆದ್ದರಿಂದ ಜಿಲ್ಲಾಸ್ಪತ್ರೆಯನ್ನು ಬೇಕಾದರೆ ಆಧುನೀಕರಿಸಲಿ. ಕಾಲೇಜು ನಗರದ ಹೊರವಲಯದಲ್ಲೇ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಆಸ್ಪತ್ರೆ ಸುತ್ತಲೂ ಈಗಿರುವ ರಕ್ತನಿಧಿ ಕೇಂದ್ರ, ಆರ್‌ಒ ಪ್ಲಾಂಟ್, ಡಯಾಲಿಸಿಸ್ ಕೇಂದ್ರ ಸೇರಿ ಇತರೆ ವಿಭಾಗಗಳಿದ್ದು, ಕಾಲೇಜು ನಿರ್ಮಾಣದ ವೇಳೆ ಕಟ್ಟಡಗಳನ್ನು ನೆಲಸಮ ಮಾಡಬೇಕಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅನಗತ್ಯ ನಷ್ಟ ಉಂಟಾಗಲಿದೆ. ಜನರ ತೆರಿಗೆಯ ಹಣವನ್ನೇಕೆ ಹಾಳು ಮಾಡಬೇಕು ಎಂದು ಪ್ರಶ್ನಿಸಿದರು.
ನಿರ್ಮಿಸಲು ಉದ್ದೇಶಿಸಿರುವ ಜಮೀನಿನ ಮೇಲೆ ತಕರಾರು ಇದ್ದು, ಈ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ ಸೂಕ್ತವಲ್ಲ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ, ಆಟದ ಮೈದಾನ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕಿದೆ. ಜಿಲ್ಲಾಸ್ಪತ್ರೆ ಆಯ್ಕೆ ಮಾಡಿಕೊಂಡರೆ ಕಾನೂನು ಹೋರಾಟಕ್ಕೂ ತೀರ್ಮಾನಿಸಲಾಗುವುದು ಎಂದು ಎಚ್ಚರಿಸಿದರು.
ಸಂಘದ ಪದಾಧಿಕಾರಿಗಳಾದ ಡಾ.ಕೆ.ಎಂ.ಬಸವರಾಜ್, ಡಾ.ಕೃಷ್ಣಮೂರ್ತಿ, ಡಾ.ಜಿ.ಟಿ.ತಿಪ್ಪಾರೆಡ್ಡಿ ಇದ್ದರು.