ಚನ್ನರಾಯಪಟ್ಟಣ: ರಾಷ್ಟ್ರೀಯ ಯುವ ದಿನವು ಮಹಾನ್ ಆಧ್ಯಾತ್ಮಿಕ ಚಿಂತಕರಾದ ಸ್ವಾಮಿ ವಿವೇಕಾನಂದರ ಜನ್ಮ ವಾರ್ಷಿಕೋತ್ಸವವನ್ನು ಸ್ಮರಿಸುವ ಕಾರಣದಿಂದಾಗಿ ಅಪಾರ ಮಹತ್ವ ಪಡೆದಿದೆ ಎಂದು ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಕೆ.ನಾಗೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಜ್ಞಾನಸಾಗರ ಅಂತಾರಾಷ್ಟ್ರೀಯ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಜ್ಞಾನಸಾಗರ ಸುಗ್ಗಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಯುವ ದಿನವು ದೇಶದ ಯುವ ಜನತೆಯ ಚೈತನ್ಯ, ಸಾಮರ್ಥ್ಯ ಮತ್ತು ಆಕಾಂಕ್ಷೆಗಳೊಂದಿಗೆ ಪ್ರತಿಧ್ವನಿಸುವ ಆಚರಣೆಯಾಗಿದೆ. ಈ ದಿನದಂದು ಸ್ವಾಮಿ ವಿವೇಕಾನಂದರ ಆಳವಾದ ಬೋಧನೆಗಳನ್ನು ಮೆಲುಕು ಹಾಕುವ ಕಾರ್ಯ ನಡೆಯುತ್ತದೆ. ಇದು ಪ್ರಪಂಚದಾದ್ಯಂತ ವ್ಯಕ್ತಿಗಳಿಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ. ಸ್ವಾಮಿ ವಿವೇಕಾನಂದ ಜಯಂತಿಯ ಮಹತ್ವವು ಆಧ್ಯಾತ್ಮಿಕ ಕ್ಷೇತ್ರಗಳನ್ನು ಮೀರಿ ವಿಸ್ತರಿಸುತ್ತದೆ. ಏಕೆಂದರೆ ಇದು ಸಾಮಾಜಿಕ ಸುಧಾರಣೆ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಅವರ ಕೊಡುಗೆಗಳನ್ನು ಸಹ ಒತ್ತಿ ಹೇಳುತ್ತದೆ. ಸ್ವಾಮಿ ವಿವೇಕಾನಂದರ ಏಕತೆ, ಸ್ವಯಂ-ಸಬಲೀಕರಣ ಮತ್ತು ಮಾನವೀಯತೆಗೆ ಸಲ್ಲಿಸಿದ ಸೇವೆಯ ಸಂದೇಶವು ಜೀವನದ ಎಲ್ಲ ಹಂತಗಳ ಜನರೊಂದಿಗೆ ಪ್ರತಿಧ್ವನಿಸುತ್ತಲೇ ಇರುತ್ತದೆ. ಈ ದಾರ್ಶನಿಕ ವ್ಯಕ್ತಿಯ ಜನ್ಮವನ್ನು ಸ್ಮರಿಸುವುದು ಮಾತ್ರವಲ್ಲದೆ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಯುವಕರ ಪಾತ್ರ ಮತ್ತು ಪ್ರಾಮುಖ್ಯತೆಯನ್ನು ಗುರುತಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ಸ್ವಾಮಿ ವಿವೇಕಾನಂದರ ತತ್ವಶಾಸ್ತ್ರವು ಪ್ರತಿ ಆತ್ಮದ ಅಗತ್ಯ ದೈವತ್ವ ಮತ್ತು ಆತ್ಮಸಾಕ್ಷಾತ್ಕಾರದ ಮಹತ್ವವನ್ನು ಒತ್ತಿಹೇಳಿತು. ಶಿಕ್ಷಣವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆಯಾಮಗಳನ್ನು ಒಳಗೊಂಡ ವ್ಯಕ್ತಿಯ ಸಮಗ್ರ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಬೇಕು ಎಂದು ಅವರು ನಂಬಿದ್ದರು. ಅವರ ಬೋಧನೆಗಳು ಶ್ರೇಷ್ಠತೆಗಾಗಿ ಶ್ರಮಿಸಲು, ಅವರ ಆಂತರಿಕ ಶಕ್ತಿಯನ್ನು ಬಳಸಿಕೊಳ್ಳಲು ಮತ್ತು ಸಮಾಜದ ಕಲ್ಯಾಣಕ್ಕೆ ಕೊಡುಗೆ ನೀಡಲು ಪೀಳಿಗೆಯನ್ನು ಪ್ರೇರೇಪಿಸಿತು ಎಂದು ತಿಳಿಸಿದರು.
ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಭಾರತಿ ನಾಗೇಶ್ ಮಾತನಾಡಿ, ವರ್ಷದ ಮೊದಲ ಹಬ್ಬವೇ ಮಕರ ಸಂಕ್ರಾಂತಿ. ಇದು ಸುಗ್ಗಿಯ ಹಬ್ಬ. ಮಕರ ಸಂಕ್ರಾಂತಿಯನ್ನು ಭಾರತ ಸೇರಿದಂತೆ, ವಿವಿಧೆಡೆ ಆಚರಿಸಲಾಗುತ್ತದೆ. ಆದರೆ ಈ ಹಬ್ಬವನ್ನು ಆಯಾಯ ಪ್ರಾಂತ್ಯಕ್ಕೆ ಅನುಸಾರವಾಗಿ ಒಂದೊಂದು ಹೆಸರಿನಲ್ಲಿ ಕರೆಯುತ್ತಾರೆ.
ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಗುಜರಾತ್‌ನಲ್ಲಿ ಈ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ ಸಮೃದ್ಧಿಯ ಹಬ್ಬ. ರೈತರಿಗೆ ಸುಗ್ಗಿ ಹಬ್ಬ. ರೈತರು ಪಸಲು ಪಡೆದು ಪೂಜಿಸುತ್ತಾರೆ. ಈ ಹಬ್ಬದಂದು ಹೊಸ ಬೆಳೆಯ ತಿನಿಸು ಹಾಗೂ ಎಳ್ಳು-ಬೆಲ್ಲವನ್ನು ತಿಂದು ಒಳ್ಳೆಯ ಮಾತನಾಡು ಎಂಬ ನುಡಿಯಿದೆ. ವಿಶಿಷ್ಟವಾಗಿ ಹಬ್ಬ ಆಚರಿಸುವ ಮೂಲಕ ಮಕ್ಕಳಿಗೆ ಕಿರಿಯ ವಯಸ್ಸಿನಲ್ಲಿ ಹಬ್ಬಗಳ ಮಹತ್ವ ಸದಾ ಉಳಿಯುವಂತೆ ಮಾಡಲಾಗುತ್ತಿದೆ. ವರ್ಷವಿಡೀ ದುಡಿದ ಜಾನುವಾರುಗಳಿಗೆ ಕೃತಜ್ಞತೆ ಸಲ್ಲಿಸುವ ಸುಗ್ಗಿ ಹಬ್ಬ ಸಂಕ್ರಾಂತಿ. ಭಾರತದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಶಾಲಾ ಮಕ್ಕಳಿಗೆ ಭಾರತೀಯ ಹಬ್ಬಗಳ ತಿಳಿವಳಿಕೆ ನೀಡುವ ಉದ್ದೇಶದಿಂದ ಶಾಲೆಯಲ್ಲಿ ಹಬ್ಬಗಳನ್ನು ಆಚರಿಸಲಾಗುತ್ತಿದೆ ಎಂದರು.
ಭತ್ತ, ರಾಗಿ, ಧಾನ್ಯಗಳ ರಾಶಿ ಪೂಜೆಯೊಡನೆ ಆರಂಭಗೊಂಡು ಶಾಲೆಯ ವಿದ್ಯಾರ್ಥಿಗಳು ಗ್ರಾಮೀಣ ಸೊಗಡಿನ ಸಂಕ್ರಾಂತಿ ಹಬ್ಬದ ಸಂಸ್ಕೃತಿ ಬಿಂಬಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ದೇಸಿಯ ಉಡುಗೆ, ತೊಡುಗೆ ತೊಟ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಅತಿಥಿಗಳ ಗಮನಸೆಳೆದರಲ್ಲದೆ ಅಪ್ಪಟ ಗ್ರಾಮೀಣ ಸೊಗಡಿನ ಸಂಕ್ರಾಂತಿ ಸಂಭ್ರಮದಲ್ಲಿ ಮಿಂದೆದ್ದರು.
ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪರಸ್ಪರ ಎಳ್ಳು, ಬೆಲ್ಲ ವಿನಿಮಯದೊಟ್ಟಿಗೆ ಸುಗ್ಗಿಹಬ್ಬ ಸಂಕ್ರಾಂತಿಯನ್ನು ಬರಮಾಡಿಕೊಂಡರು.
ಡೀನ್ ಸುಜಾ ಫಿಲಿಪ್, ಆಡಳಿತಾಧಿಕಾರಿ ಫಿಲಿಪ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.