ಜ್ಞಾನವಿಕಾಸ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಟಿಸಿಜಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಎಸ್.ಎ.ಮುರಳೀಧರ್, ಪಿ.ಕೆ.ಲಕ್ಷ್ಮೀ, ತೇಲಪಂಡ ಕವನ್ ಕಾರ್ಯಪ್ಪ ಇದ್ದರು.  
ಜಿಲ್ಲೆ

ವಿವೇಕಾನಂದರ ಚಿಂತನೆ, ವಿಚಾರಧಾರೆ ಅರ್ಥೈಸಿಕೊಳ್ಳಿ

ಸೋಮವಾರಪೇಟೆ: ವಿದ್ಯಾರ್ಥಿ ದಿಸೆಯಲೇ ವಿವೇಕಾನಂದರ ಚಿಂತನೆ ಮತ್ತು ವಿಚಾರಧಾರೆಗಳನ್ನು ಅರ್ಥೈಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್ ಸಲಹೆ ನೀಡಿದರು.

ವಿವೇಕಾನಂದರ 161ನೇ ಜನ್ಮ ದಿನಾಚರಣೆ ಅಂಗವಾಗಿ ಜ್ಞಾನವಿಕಾಸ ಶಾಲೆ ಮತ್ತು ಕೊಡಗು ಪತ್ರಕರ್ತರ ಸಂಘದ ಸಹಯೋಗದಲ್ಲಿ ಜ್ಞಾನವಿಕಾಸ ಶಾಲೆಯಲ್ಲಿ ಮಂಗಳವಾರ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ, ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ಸ್ವಾತಂತ್ರ್ಯಪೂರ್ವದಲ್ಲೇ ವಿವೇಕಾನಂದರು ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಿದರು. 1893ರಲ್ಲಿ ಚಿಕಾಗೋದಲ್ಲಿ ಜರುಗಿದ ಸರ್ವಧರ್ಮ ಸಮ್ಮೇಳನದಲ್ಲಿ ದೇಶವನ್ನು ಪ್ರತಿನಿಧಿಸಿ ಭಾರತದ ಘನತೆಯನ್ನು ಎತ್ತಿಹಿಡಿದರು. ಅಲ್ಲದೆ ತಮ್ಮ ಗುರು ರಾಮಕೃಷ್ಣ ಪರಮಹಂಸರ ವಿಚಾರಧಾರೆಗಳನ್ನು ರಾಮಕೃಷ್ಣ ಮಿಷನ್ ಆರಂಭಿಸುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡುವ ಕಾಯಕಕ್ಕೆ ಮುಂದಾದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ವೆಂಕಟೇಶ್, ಶಾಲಾ ಮುಖ್ಯ ಶಿಕ್ಷಕ ಪಿ.ಕೆ.ಲಕ್ಷ್ಮೀ, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ತೇಲಪಂಡ ಕವನ್ ಕಾರ್ಯಪ್ಪ ಇದ್ದರು. ತೀರ್ಪುಗಾರರಾಗಿ ಆಗಮಿಸಿದ್ದ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಎಂ.ಎಸ್.ಸುನಿಲ್, ದೇವರಾಜು ಅವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು.