ಜಿಲ್ಲೆ

ವಿವೇಕಾನಂದರ ಆದರ್ಶ ಯುವ ಪೀಳಿಗೆಗೆ ದಾರಿ ದೀಪ

ಬೇಲೂರು: ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಬೇಲೂರಿನ ಶ್ರೀಚನ್ನಕೇಶವಸ್ವಾಮಿ ದೇಗುಲ ಆವರಣದಲ್ಲಿ ಎಂ.ಎಸ್.ನಾಗೇಂದ್ರ ಸೇವಾ ಪ್ರತಿಷ್ಠಾನದಿಂದ ಗುರುವಾರ ಬೆಳಗ್ಗೆ ಆಯೋಜಿಸಿದ್ದ ವಿವೇಕ ನಡಿಗೆಗೆ ಚಿತ್ರನಟಿ ಹರ್ಷಿಕಾ ಪೂಣಚ್ಚ ಚಾಲನೆ ನೀಡಿದರು.


ಸ್ವಾಮಿ ವಿವೇಕಾನಂದರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ದಾರಿ ದೀಪವಾಗಿದೆ. ನಾವುಗಳು ಅವರ ತತ್ವ ಆದರ್ಶಗಳನ್ನು ಪಾಲಿಸಿ ಅವರಂತೆ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಅವರ ಜಯಂತಿಯಂದು ವಿವೇಕ ನಡಿಗೆ ಆಯೋಜಿಸಿರುವುದು ಯುವ ಸಮುದಾಯಕ್ಕೆ ಪ್ರೇರಣೆ ಎಂದು ಅವವರು ಹೇಳಿದರು.


ಎಂ.ಎಸ್.ನಾಗೇಂದ್ರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಸಿದ್ದೇಶ್ ನಾಗೇಂದ್ರ ಮಾತನಾಡಿ, ಸ್ವಾಮಿ ವಿವೇಕಾನಂದರ 160ನೇ ಜಯಂತಿ ಅಂಗವಾಗಿ ವಿವೇಕ ನಡಿಗೆ ಆಯೋಜಿಸಲಾಗಿದೆ. ಯುವ ಜನತೆಗೆ ಏನನ್ನಾದರೂ ಸಾಧಿಸಬೇಕೆನ್ನುವ ಛಲ ತುಂಬವ ನಿಟ್ಟಿನಲ್ಲಿ ವಿವೇಕ ನಡಿಗೆಗೆ ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ಯುವ ಪೀಳಿಗೆ ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರಂತೆ ಮಹತ್ತರ ಸಾಧನೆ ಮಾಡಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.


ಬಿಜೆಪಿ ಮುಖಂಡ ಸಂತೋಷ್ ಕೆಂಚಾಂಬ ಮಾತನಾಡಿ, ಪ್ರಪಂಚದಲ್ಲಿ ಯುವ ಶಕ್ತಿ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಸ್ವಾಮಿ ವಿವೇಕಾನಂದರು ತೋರಿಸಿಕೊಟ್ಟಿದ್ದಾರೆ. ನಾವು ಇದನ್ನು ಅರ್ಥ ಮಾಡಿ ಕೊಳ್ಳಬೇಕಿದೆ. ಜತೆಗೆ ಇಂತಹ ವಿವೇಕ ನಡಿಗೆ ಮೂಲಕ ಯುವ ಜನತೆಯಲ್ಲಿ ಜಾಗೃತಿ ಮೂಡಿಸುವ ಮೂಲಕ ವಿವೇಕಾನಂದರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಎಂ.ಎಸ್.ನಾಗೇಂದ್ರ ಪ್ರತಿಷ್ಠಾನ ಮುಂದಾಗಿರುವುದು ಶ್ಲಾಘನೀಯ ಎಂದರು.


ವಿವಿಧ ಕ್ರೀಡೆಯಲ್ಲಿ ಸಾಧನೆಗೈದ ಬೇಲೂರಿನ ಕ್ರೀಡಾಪಟುಗಳಾದ ಪ್ರಜ್ವಲ್, ಮನು, ಮಹಮ್ಮದ್ ಫರ್ಹಾನ್‌ರನ್ನು ಸನ್ಮಾನಿಸಲಾಯಿತು. ವಿವೇಕ ನಡಿಗೆಯು ಶ್ರೀ ಚನ್ನಕೆಶವಸ್ವಾಮಿ ದೇಗುಲ ಆವರಣದಿಂದ ಪಟ್ಟಣದ ಮುಖ್ಯರಸ್ತೆಗಳಲ್ಲಿ ಸಾಗಿ ನೆಹರು ನಗರ ತಲುಪಿ ಬಳಿಕ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅಂತ್ಯಗೊಂಡಿತು. ಈ ಸಂದರ್ಭ ಕಾರ್ಯಕ್ರಮಕ್ಕೆ ಆಗಮಿಸಿದ ಶಾಲಾ, ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ರಾಜಗೋಪಾಲ್, ಜಿಪಂ ಮಾಜಿ ಸದಸ್ಯ ಅಮಿತ್ ಕುಮಾರ್‌ಶೆಟ್ಟಿ, ತಾಪಂ ಮಾಜಿ ಸದಸ್ಯ ಶಶಿಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗಂಗೂರು ಶಿವಕುಮಾರ್, ಮುಖಂಡರಾದ ಲೋಕೇಶ್, ರಾಜು, ಕ್ರೀಡಾ ಮುಖ್ಯಸ್ಥ ಭುಜಂಗ, ಗ್ರಾಪಂ ಸದಸ್ಯೆ ಸುಜಾತಾ, ಹೊಸಕೋಟೆ ಭಾಸ್ಕರ್, ಕೆಡಿಪಿ ಸದಸ್ಯ ಬಸವರಾಜು ಇತರರು ಇದ್ದರು.