ಮೈಸೂರು: ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮದ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ಮತ್ತು ವಿವೇಕ ಸ್ಮಾರಕಕ್ಕೆ ಕಂಪನಿಗಳ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯಿಂದ ಅಗತ್ಯ ಅನುದಾನ ಕೊಡಿಸಲಾಗುವುದು ಎಂದು ಸಂಸದ ತೇಜಸ್ವಿ ಸೂರ್ಯ ಭರವಸೆ ನೀಡಿದರು.
ಯಾದವಗಿರಿಯ ರಾಮಕೃಷ್ಣ ವಿದ್ಯಾಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿವೇಕ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಮತ್ತು ರಾಜ್ಯದಲ್ಲಿರುವ ಉದ್ದಿಮೆಗಳನ್ನು ಸಂಪರ್ಕಿಸಿ ಅದರ ಸಿಎಸ್‌ಆರ್ ಅನುದಾನವನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಸಾಕಷ್ಟು ಹೋರಾಟ ಮತ್ತು ಅಡಚಣೆಯ ನಡುವೆ ರಾಮಕೃಷ್ಣ ಆಶ್ರಮದಿಂದ ಸ್ಮಾರಕ ನಿರ್ಮಾಣವಾಗುತ್ತಿದ್ದು, ಸ್ಮಾರಕ ನಿರ್ಮಾಣಕ್ಕೆ ರಾಮಕೃಷ್ಣ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘವು 10 ಕೋಟಿ ರೂ. ನೆರವು ನೀಡುವುದು ಅಭಿನಂದನಾರ್ಹ ವಿಚಾರವಾಗಿದೆ ಎಂದರು.
ಮುಂದಿನ ಮೂರು ವರ್ಷಗಳಲ್ಲಿ ಭಾರತ ಜಾಗತಿಕ 3ನೇ ಆರ್ಥಿಕ ಶಕ್ತಿಯ ದೇಶವಾಗಿ ಹೊರಹೊಮ್ಮಲಿದೆ. ಅದಕ್ಕೆ ಪೂರಕವಾಗಿ ಯುವ ಶಕ್ತಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಯುವ ಜನರು ಕೆಲಸ ಮಾಡಬೇಕಿದೆ.
ಜಗತ್ತಿನ ಅತಿ ಪ್ರಬಲ ರಾಷ್ಟ್ರಗಳ ಗುಂಪಾದ ಜಿ-4 ದೇಶಗಳೊಂದಿಗೆ ಇತ್ತೀಚೆಗೆ ಸಭೆ ನಡೆದಿತ್ತು. ಆ ದೇಶಗಳು ಭಾರತದ ಬಗ್ಗೆ ಹೊಂದಿರುವ ಅಭಿಮಾನವನ್ನು ಗಮನಿಸಿದ್ದೇನೆ. ಇದೀಗ ಭಾರತ ಜಿ-21 ದೇಶಗಳಿಗೆ ಧ್ವನಿಯಾಗಿದೆ ಎಂದರು.
ದೇಶದಲ್ಲಿ ಕಳೆದ ಒಂದು ದಶಕದಲ್ಲಿ 100 ವಿಮಾನ ನಿಲ್ದಾಣ ನಿರ್ಮಾಣವಾಗಿವೆ. ಮುಂದಿನ 5 ವರ್ಷದಲ್ಲಿ 100 ಲಕ್ಷ ಕೋಟಿ ರೂ. ಮೊತ್ತದಷ್ಟು ನಿರ್ಮಾಣ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯಾಗಲಿದೆ. ಈ ಎಲ್ಲವೂ ದೇಶ ಸಾಗುತ್ತಿರುವ ಪ್ರಗತಿಯ ದಾರಿಯನ್ನು ತೋರುತ್ತದೆ ಎಂದರು.
ಸುವರ್ಣ ಮಹೋತ್ಸವ ಸಂಚಿಕೆ ಮತ್ತು ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(ಡಿಆರ್‌ಡಿಒ) ಮಾಜಿ ಮುಖ್ಯಸ್ಥ ಡಾ.ವಿ.ಕೆ.ಆತ್ರೆ, ರಾಮಕೃಷ್ಣಾಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ಸ್ವಾಮಿ ಯುಕ್ತೇಶಾನಂದ, ಸ್ವಾಮಿ ಸತ್ಯೇಶಾನಂದ, ಪ್ರಾಂಶುಪಾಲ ಟಿ.ಕೆ.ಚಂದ್ರಶೇಖರ್, ಸಂಘದ ಉಪಾಧ್ಯಕ್ಷ ಪಾರ್ಥಸಾರಥಿ ಇನ್ನಿತರರಿದ್ದರು.