ಜಿಲ್ಲೆ

ವಿವೇಕ ಶಾಲೆ ಯೋಜನೆ ಕೊಠಡಿಗಳ ನಿರ್ಮಾಣ

Mysuru Rural

ಧರ್ಮಾಪುರ: ವಿವೇಕ ಶಾಲೆ ಯೋಜನೆ ಅನುದಾನದಲ್ಲಿ ಎರಡು ಹಾಗೂ ಶಾಸಕರ ಅನುದಾನದಲ್ಲಿ ಎರಡು ಸೇರಿದಂತೆ ನಾಲ್ಕು ಕೊಠಡಿಗಳನ್ನು 57 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುವ ಕಾಮಗಾರಿಗೆ ಶಾಸಕ ಎಚ್.ಪಿ. ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು.

ಸಿಬಿಟಿ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ 18 ಶಾಲೆಗಳಿಗೆ 21 ಕೊಠಡಿ ಮಂಜೂರಾಗಿವೆ. ಈ ಗ್ರಾಮಕ್ಕೆ 1964ರಲ್ಲಿ ಡಿ.ದೇವರಾಜ ಅರಸು ಕಾಲದಲ್ಲಿ ನಾಲ್ಕು ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿತ್ತು. ಅಂದು ಅರಸರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ಆಶಯದಂತೆ ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುತ್ತಿರುವುದಾಗಿ ತಿಳಿಸಿದರು.

ಸಿಬಿಟಿ ಕಾಲನಿ ಶಾಲೆಗೆ ಶಿಕ್ಷಣ ಇಲಾಖೆಯಿಂದ 4.46 ಲಕ್ಷ ರೂ. ಹಾಗೂ ನರೇಗಾ ಯೋಜನಡಿ 74 ಸಾವಿರ ರೂ. ಸೇರಿದಂತೆ 5.20 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಶೌಚಗೃಹ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಶಾಸಕ ಎಚ್.ಪಿ. ಮಂಜುನಾಥ್ ಶಾಲಾ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಮಕ್ಕಳ ದಿನ ಆಚರಿಸಿದರು. ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರು ಮತ್ತು ಮಾಜಿ ರಾಷ್ಟ್ರಪತಿ ಡಾ.ಎಸ್.ರಾಧಾಕೃಷ್ಣನ್ ಅವರನ್ನು ಸ್ಮರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ, ಬಿಆರ್‌ಸಿ ಸಂತೋಷ್‌ಕುಮಾರ್, ಗ್ರಾ.ಪಂ. ಉಪಾಧ್ಯಕ್ಷ ವೆಂಕಟೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಾದೇಶ, ಮುಖಂಡರಾದ ಶಿವಲಿಂಗು, ಕುಪ್ಪುಸ್ವಾಮಿ, ವೆಳ್ಳಂಗಿರಿ, ನಾಗರಾಜ್, ಪಳನಿಸ್ವಾಮಿ, ದೊರೆಸ್ವಾಮಿ, ವೇಲುಸ್ವಾಮಿ, ಆರ್ಮುಗ ಇತರರು ಇದ್ದರು.