ಜಿಲ್ಲೆ

ವಿವೇಕ-ವಿದ್ಯಾರ್ಥಿ ಪರೀಕ್ಷೆ ನ. 5ಕ್ಕೆ

ಬೀದರ್: ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ಶೈಕ್ಷಣಿಕ ಮಟ್ಟ ಸುಧಾರಣೆ ನಿಟ್ಟಿನಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದಿಂದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ನ.5ರಂದು ವಿವೇಕ-ವಿದ್ಯಾರ್ಥಿ ಪರೀಕ್ಷೆ ಆಯೋಜಿಸಲಾಗಿದೆ ಎಂದು ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಜ್ಯೋತಿರ್ಮಯಾನಂದ ತಿಳಿಸಿದರು.
ಕರೊನಾ ನಂತರದ ದಿನಗಳಲ್ಲಿ ಏಕಾಗ್ರತೆ ಕೊರತೆ ವಿದ್ಯಾರ್ಥಿಗಳಲ್ಲಿ ಎದ್ದು ಕಾಣುತ್ತಿದ್ದು, ಇದನ್ನು ಪರಿಹರಿಸಲು ರಾಜ್ಯಾದ್ಯಂತ ಪರೀಕ್ಷೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ 25-30 ಸಾವಿರ ಸೇರಿ ರಾಜ್ಯಾದ್ಯಂತ ಸುಮಾರು 3 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪುಸ್ತಕಗಳನ್ನು ಒಳಗೊಂಡು 50 ರೂ. ಶುಲ್ಕ ಪಾವತಿಸಿ ಆ.30ರೊಳಗೆ ಮಕ್ಕಳು ಹೆಸರು ನೊಂದಾಯಿಸಬೇಕು. ಆಯಾ ಶಾಲೆಗಳಲ್ಲೇ ನ.5ರಂದು ಬೆಳಗ್ಗೆ 10ಕ್ಕೆ 100 ಅಂಕಗಳ ಮೂರು ಗಂಟೆ ಅವ ಪರೀಕ್ಷೆ ನಡೆಸಲಾಗುವುದು. ಮೂರು ತರಗತಿಗಳಿಗೆ ಪ್ರತ್ಯೇಕವಾಗಿ ಮೂರು ರ್ಯಾಂಕ್ ನೀಡಲಾಗುವುದು ಎಂದರು.
ಜಿಲ್ಲಾ ಮಟ್ಟದಲ್ಲಿ ರ್ಯಾಂಕ್ ಪಡೆಯುವ ಮಕ್ಕಳಿಗೆ ಕ್ರಮವಾಗಿ 2500 ರೂ., 2,000 ಮತ್ತು 1500 ರೂ. ನಗದು ಬಹುಮಾನ, ರಾಜ್ಯ ಮಟ್ಟದಲ್ಲಿ ರ್ಯಾಂಕ್ ಪಡೆದ ಪ್ರತಿ ವಿದ್ಯಾರ್ಥಿಗೆ ಕ್ರಮವಾಗಿ 10 ಸಾವಿರ ರೂ., 8 ಸಾವಿರ ಮತ್ತು 6 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಶ್ರೀ ಸ್ವಾಮಿ ಪುರಷೋತ್ತಮಾನಂದ ಬರೆದಿರುವ ವಿದ್ಯಾರ್ಥಿಗಳಿಗಾಗಿ ಮತ್ತು ವಿವೇಕಾನಂದರ ವಿದ್ಯಾರ್ಥಿ ಜೀವನ ಈ ಎರಡು ಕಿರು ಪುಸ್ತಕಗಳನ್ನು ಆಧರಿಸಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಸಂಬಂಧ ಶಿಕ್ಷಣ ಇಲಾಖೆಯಿಂದ ಜಿಲ್ಲೆಯ ಎಲ್ಲ ಪ್ರೌಢ ಶಾಲೆಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಎಲ್ಲ ಪರೀಕ್ಷಾರ್ಥಿಗಳಿಗೆ ಈ ಪುಸ್ತಕಗಳನ್ನು ತಲುಪಿಸಲಾಗುವುದು. 8, 9 ಮತ್ತು 10ನೇ ತರಗತಿಗಳಿಗೆ ಶಾಲಾ, ರಾಜ್ಯ ಹಾಗೂ ರಾಜ್ಯ ಮಟ್ಟ ಹೀಗೆ ಮೂರು ವಿಭಾಗಗಳಲ್ಲಿ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು. ಕನಿಷ್ಠ 40 ಅಂಕ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಲಾಗುವುದು ಎಂದು ಹೇಳಿದರು.
ಶ್ರೇಯಸ್ಸು ಮತ್ತು ಶೈಕ್ಷಣಿಕ ಭವಿಷ್ಯಕ್ಕಾಗಿ ಶಾಲೆಯ ಎಲ್ಲ ಮಕ್ಕಳು ಕಡ್ಡಾಯವಾಗಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕು. ಮಾಹಿತಿಗಾಗಿ ಮೊ. 94492 74246, 63614 09357, 94492 74640, 92416 95053 ಅಥವಾ 95913 56700ಗೆ ಸಂಪರ್ಕಿಸಬಹುದು ಎಂದು ಎಂದು ಕೋರಿದರು.