ಸೋಮವಾರಪೇಟೆ : ಇಲ್ಲಿನ ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ವತಿಯಿಂದ ವಿಶ್ವಪರಿಸರ ದಿನಾಚರಣೆ ಅಂಗವಾಗಿ ವಿವಿಧೆಡೆ ಸಸಿ ನೆಡುವ ಮೂಲಕ ಪರಿಸರ ದಿನವನ್ನು ಸಂಭ್ರಮಿಸಲಾಯಿತು. ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಸಂಸ್ಥೆ ಅಧ್ಯಕ್ಷ ಎಸ್.ಆರ್.ವಸಂತ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪರಿಸರ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಗಿನಲ್ಲೂ ಅನೇಕ ಅನಾಹುತಗಳನ್ನು ಅನುಭವಿಸುತ್ತಿದ್ದೇವೆ. ಮಳೆಗಾಲದಲ್ಲಿ ಬೆಟ್ಟಗುಡ್ಡಗಳು ಕುಸಿಯುತ್ತಿವೆ. ಪ್ರಸಕ್ತ ವರ್ಷ ಅನೇಕ ಕಡೆ ಕುಡಿಯುವ ನೀರಿನ ಸಮಸೈಯನ್ನು ಎದುರಿಸಬೇಕಾಯಿತು. ಅಂತರ್ಜಲ ಕಡಿಮೆಯಾಗುತ್ತಿವೆ. ಬೇಸಿಗೆಯಲ್ಲಿ ಅತೀಹೆಚ್ಚು ಬಿಸಿಲಿನ ತಾಪದಿಂದ ತೊಂದರೆ ಅನುಭವಿಸುವಂತಾಗಿದೆ. ನಾವೆಲ್ಲರೂ ಪರಿಸರ ರಕ್ಷಣೆಗೆ ಪ್ರತಿಜ್ಞೆ ಮಾಡಬೇಕಾಗಿದೆ. ಮನೆಯ ಶುಭ ಸಮಾರಂಭಗಳಲ್ಲಿ ಪ್ರತಿಯೊಬ್ಬರೂ ಗಿಡ ನೆಡುವ ಮೂಲಕ ಸಂಭ್ರಮ ಪಡಬೇಕು ಎಂದು ಹೇಳಿದರು.