ಜಿಲ್ಲೆ

ವಿವಿಧ ಸ್ತರದಲ್ಲಿ ಭಾರತ ವಿಶ್ವಕ್ಕೆ ಮಾದರಿ:ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಬಣ್ಣನೆ

ಮೈಸೂರು: ಭಾರತ ಎಂದರೆ ಭೂಪಟ ಅಲ್ಲ. ಅದೊಂದು ಸಂಸ್ಕೃತಿ ಮತ್ತು ಪರಂಪರೆಯ ಸಮ್ಮಿಲನ ಎಂದು ಉರಿಗಲಿಂಗಪೆದ್ದಿ ಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಅಭಿಪ್ರಾಯಪಟ್ಟರು.
ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ರಂಗಭೂಮಿ, ಜಾನಪದ ಕಲಾಪ್ರಕಾರಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶ ಎಂದರೆ ಕಲ್ಲು, ಗುಡ್ಡ, ನದಿ, ಪರ್ವತ, ಸರೋವರ, ಅರಣ್ಯ ಪ್ರದೇಶದೊಂದಿಗೆ ಪರಂಪರೆ, ಧಾರ್ಮಿಕತೆಗಳ ಸಂಗಮವೂ ಆಗಿದೆ. ಜನಪದ ಸಂಸ್ಕೃತಿ ಭಾರತದ ಬೇರುಗಳು. ಈ ಬೇರುಗಳು ಹಲವು ಸ್ತರದಲ್ಲಿ ವಿಶ್ವದಾದ್ಯಂತ ಸಂಸ್ಕೃತಿಯನ್ನು ಬಿಂಬಿಸಿವೆ ಎಂದು ಹೇಳಿದರು.
ನಮ್ಮ ದೇಶದ ಜನಪದ ಕಲಾ ಪ್ರಕಾರಗಳು ಇಂದು ವಿಶ್ವಕ್ಕೆ ಮಾದರಿಯಾಗಿವೆ. ಅಷ್ಟು ಅದ್ಭುತ ಪ್ರತಿಭೆಯ ಕಲಾ ಪ್ರಕಾರಗಳು ನಮ್ಮಲಿವೆ, ನಾವು ಅದನ್ನು ಅರ್ಥ ಮಾಡಿಕೊಳ್ಳುವ ಸಾಮಾನ್ಯ ಪ್ರಜ್ಞೆ ನಮಲ್ಲಿರಬೇಕಾದ ಅವಶ್ಯಕತೆಯಿದೆ. ನಮ್ಮ ಸಂಸ್ಕೃತಿ ದೀಪದಿಂದ ದೀಪವನ್ನು ಬೆಳಗುವ ಸಂಸ್ಕೃತಿ. ನಾಡು, ನುಡಿ, ಜಲ, ಭಾಷೆಯನ್ನು ಜೀವಂತವಾಗಿರಿಸುವ ನಮ್ಮ ಮಣ್ಣಿನ ಮೂಲ ಸಂಸ್ಕೃತಿ ಜನಪದ ಸಂಸ್ಕೃತಿ ಎಂದು ಬಣ್ಣಿಸಿದರು.
ಭವ್ಯವಾದ ನಮ್ಮ ಸಂಸ್ಕೃತಿಯನ್ನು ರಕ್ಷಣೆಯನ್ನು ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾವಿರಾರು ಕೋಟಿ ರೂ. ವಿನಿಯೋಗ ಮಾಡುತ್ತಿದೆ. ಆದರೆ ಇಂದು ರಂಗಭೂಮಿ, ರಂಗಭೂಮಿಯಾಗಿ ಉಳಿದಿಲ್ಲ. ಅಲ್ಲಿನ ದೃಷ್ಟಿಕೋನವೇ ಬದಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಟ್ಟುವ ಕೆಲಸಗಳನ್ನು ಮಾಡಿ: ಜನಪದ ಸಂಸ್ಕೃತಿ ದೇಶಕಟ್ಟುವ ಸಂಸ್ಕೃತಿ ದೇಶ ಒಡೆಯುವ ಸಂಸ್ಕೃತಿಯಲ್ಲ, ಆದ್ದರಿಂದ ಜನಪದ ಸಂಸ್ಕೃತಿ ಎಲ್ಲರನ್ನು ಒಳಗೊಂಡು ದೇಶದ ಮನಸ್ಸುಗಳನ್ನು ಕಟ್ಟುವ ಸಂಸ್ಕೃತಿಯಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಜನಪದ ಗೀತೆಗಳ ಮುಖಾಂತರವಾಗಿ ದೇಶಕಟ್ಟುವ, ಒಡೆದ ಮನಸ್ಸುಗಳನ್ನು ಕಟ್ಟುವ ಕೆಲಸಗಳನ್ನು ಮಾಡಿ ಎಂದು ಸ್ವಾಮೀಜಿ ಹೇಳಿದರು.
ಮರೆಯಬೇಡಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ. ಎನ್. ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಜನಪದ ಕಲೆಗಳು ಎಂದು ಕೂಡ ಮರೆಯಾಗಬಾರದು. ಮರೆಯಾಗದಂತೆ ಎಚ್ಚರ ವಹಿಸುವುದು ಸಮಾಜದ ಕರ್ತವ್ಯ. ಈ ಕಲೆಗಳನ್ನು ಮುಂದುವರಿಸಿಕೊಂಡು ಹೋಗೋಣ, ಈ ಕಲೆಗಳನ್ನು ಯುವ ಶಕ್ತಿಗೆ ನೀಡುತ್ತ, ಈ ನೆಲ ಮೂಲದ ಸಂಸ್ಕೃತಿಯನ್ನು ಉಳಿಸಿಕೊಳ್ಳುತ್ತ, ಸಂಸ್ಕೃತಿಯನ್ನು ಸಮೃದ್ಧಗೊಳಿಸೋಣ ಎಂದು ಹೇಳಿದರು.
ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ದನ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಜವರಪ್ಪ, ಗೌತಮ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ತಲಕಾಡು ಇತರರು ಇದ್ದರು.