ಜಿಲ್ಲೆ

ವಿವಿಧ ಸೌಲಭ್ಯಗಳ ಜಾಗೃತಿ ಅಭಿಯಾನಕ್ಕೆ ನ್ಯಾ.ನೇರಳೆ ಚಾಲನೆ

ಬಾಗಲಕೋಟೆ: ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡುತ್ತಿರುವ ವಿವಿಧ ಸೌಲಭ್ಯಗಳ ಮಾಹಿತಿ ಹಾಗೂ ಕಾನೂನು ಅರಿವು ನೆರವು ಜಾಗೃತಿ ಅಭಿಯಾನಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ವಿಜಯ ನೇರಳೆ ಚಾಲನೆ ನೀಡಿದರು.

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗುರುವಾರ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ಅಭಿಯಾನ ೧೦ ದಿನಗಳ ಕಾಲ ನಡೆಯಲಿದ್ದು, ಕಾರ್ಮಿಕ ಇಲಾಖೆಯಿಂದ ಕೊಡಮಾಡುವ ಪಿಂಚಣಿ ಸೌಲಭ್ಯ, ಕುಟುಂಬ ಪಿಂಚಣಿ ಸೌಲಭ್ಯ, ವೈದ್ಯಕೀಯ ಸಹಾಯಧನ, ಹೆರಿಗೆ ಸೌಲಭ್ಯ, ಮದುವೆ ಸಹಾಯಧನ ಸೇರಿದಂತೆ ಮುಂತಾದ ಸೌಲಭ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಕಟ್ಟಡ ಕಾರ್ಮಿಕರಲ್ಲದವರು ನಕಲಿ ದಾಖಲೆಗಳನ್ನು ಸಲ್ಲಿಸಿ ಮಂಡಳಿಯಲ್ಲಿ ನೋಂದಣಿ ಮತ್ತು ಸೌಲಭ್ಯಗಳನ್ನು ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅಂತಹ ಕಾರ್ಮಿಕರು ಖುದ್ದಾಗಿ ತಾವೇ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಗುರುತಿನ ಚೀಟಿ ಹಿಂದಿರುಗಿಸುವ ಮೂಲಕ ತಮ್ಮ ನೊಂದಣಿಯನ್ನು ರದ್ದು ಪಡಿಸಿಕೊಳ್ಳಬೇಕು ಎಂದು ತಿಳಿಸಿದ ಅವರು ಇದರ ಜೊತೆಗೆ ಕಾನೂನು ಅರಿವು ನೆರವಿನ ಮಾಹಿತಿ ಕೂಡ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ, ಜಿಲ್ಲಾ ಕಾರ್ಮಿಕ ಅಧಿಕಾರಿ ತರನಲ್ ಬೆಂಗಾಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.