ಮಳವಳ್ಳಿ: ಹಿಂದುಗಳು ಮೌನವಾಗಿದ್ದಾರೆಂದು ಪದೇ ಪದೆ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ದುಷ್ಟ ಕೂಟಗಳು ತೊಂದರೆ ನೀಡುವ ವ್ಯವಸ್ಥಿತ ಷಡ್ಯಂತ್ರಗಳು ನಡೆಯುತ್ತಿವೆ ಎಂದು ವೀರಶೈವ ಮಹಾಸಭಾ ತಾಲೂಕು ನಿರ್ದೇಶಕ ಕ್ಯಾತನಹಳ್ಳಿ ಅಶೋಕ್ ಕಿಡಿಕಾರಿದರು.
ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಸುಳ್ಳು ಆರೋಪಗಳನ್ನು ಖಂಡಿಸಿ ಪಟ್ಟಣದಲ್ಲಿ ಶನಿವಾರ ವಿವಿಧ ಮಠಾಧೀಶರು ಸೇರಿದಂತೆ ಹಲವು ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೆಲವು ತಿಳಿಗೇಡಿಗಳನ್ನು ಬಳಸಿಕೊಂಡು ಧರ್ಮಾಂಧರು ಆಗಿಂದಾಗ್ಗೆ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಅಪಪ್ರಚಾರ ನಡೆಸುವ ಮೂಲಕ ನಮ್ಮ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತಿದ್ದಾರೆ. ಇನ್ನು ಇಂತಹ ದುಷ್ಕೃತ್ಯಗಳ ಹುನ್ನಾರಕ್ಕೆ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಶಬರಿಮಲೆ, ಧರ್ಮಸ್ಥಳದಂತಹ ಕ್ಷೇತ್ರಗಳಿಗೆ ಅನೇಕ ಷಡ್ಯಂತ್ರಗಳನ್ನು ರೂಪಿಸಿ ಜನಸಾಮಾನ್ಯರಲ್ಲಿ ಅನುಮಾನ ಮೂಡಿಸುವಂತಹ ನಿಟ್ಟಿನಲ್ಲಿ ಕಟ್ಟುಕಥೆಗಳನ್ನು ಕಟ್ಟಿ ಅಲ್ಲಿನ ಪಾವಿತ್ರೃತೆಗೆ ಧಕ್ಕೆ ತರುವಂತಹ ಯೋಜನೆ ರೂಪಿಸುತ್ತಿದ್ದಾರೆ. ಇದಕ್ಕೆ ಅನ್ಯಧರ್ಮದ ಕೈವಾಡವಿದ್ದು, ಜಾಗತಿಕ ಮಟ್ಟದಿಂದ ಹಣಕಾಸು ಈ ದುಷ್ಕೃತ್ಯಕ್ಕೆ ಪೂರೈಕೆಯಾಗುತ್ತಿರುವ ವಿಷಯ ಗೌಪ್ಯವಾಗೇನು ಉಳಿದಿಲ್ಲ. ಹಿಂದುಗಳಿಗೆ ಇರುವ ಏಕೈಕ ದೇಶ ಅದು ಭಾರತ ಮಾತ್ರವಾಗಿದೆ. ಇಲ್ಲಿಯೂ ತಮ್ಮ ಅಧಿಪತ್ಯ ಸಾಧಿಸಲು ಅನ್ಯ ಧರ್ಮಿಯರು ನಡೆಸುತ್ತಿರುವ ಕೃತ್ಯಗಳು ಈಗಾಗಲೇ ಜಗಜ್ಜಾಹೀರವಾಗಿವೆ. ಇಂತಹ ದುಷ್ಟಶಕ್ತಿಗಳ ವಿರುದ್ಧ ಹಿಂದುತ್ವದ ಉಳಿವಿಗಾಗಿ ಸಂಘಟಿತರಾಗಬೇಕಾದ ಕಾಲ ಸನ್ನಿಹಿತವಾಗಿದ್ದು, ಎಲ್ಲರೂ ಒಗ್ಗಟ್ಟಿನ ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದು ಕರೆ ನೀಡಿದರು.
ಇದಕ್ಕೂ ಮೊದಲು ಪ್ರವಾಸಿ ಮಂದಿರದ ಬಳಿ ವಿವಿಧ ಮಠಗಳ ಸ್ವಾಮೀಜಿಗಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಹಲವು ಸಂಘಟನೆಯ ಕಾರ್ಯಕರ್ತರು ಮತ್ತು ಮುಖಂಡರು ಜಮಾವಣೆಗೊಂಡು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ತಾಲೂಕು ಕಚೇರಿವರೆಗೆ ಬೃಹತ್ ಪ್ರತಿಭಟನಾ ರ‌್ಯಾಲಿಯಲ್ಲಿ ಆಗಮಿಸಿ ತಹಸೀಲ್ದಾರ್ ಕಚೇರಿ, ನಂತರ ಪೊಲೀಸ್ ಠಾಣೆಗೆ ತೆರಳಿ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಕುಂದೂರು, ಅಣಕೋಳ, ಹಂಗ್ರಾಪುರ, ಹೆಬ್ಬಣಿ, ಡಿ.ಹಲಸಹಳ್ಳಿ ಬಳಿಯ ಗವಿಮಠ, ದ್ಯಾವಪಟ್ಟಣ ಗ್ರಾಮಗಳ ಮಠಾಧೀಶರು ಸೇರಿದಂತೆ ಪುರಸಭೆ ಸದಸ್ಯರಾದ ಟಿ.ನಂದಕುಮಾರ್, ಬಸವರಾಜು, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಮೂರ್ತಿ, ಮುಖಂಡರಾದ ಸುಂದ್ರಪ್ಪ, ಬಸವರಾಜು, ಶಿವಲಿಂಗಸ್ವಾಮಿ ಇದ್ದರು.