ಕೊಪ್ಪಳ:ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕಿ ಲತಾ ಕುಮಾರಿ ವರ್ಗಾವಣೆ ಮಾಡದಂತೆ ಹಾಗೂ ಇತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ವಿಕಲಚೇತನ ಹಾಗೂ ವಿವಿಧೊದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಜಿಲ್ಲಾ ಪದಾಧಿಕಾರಿಗಳು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಲತಾ ಕುಮಾರಿ ಅವರು ಇಲಾಖೆ ಜವಾಬ್ದಾರಿ ವಹಿಸಿಕೊಂಡಾಗಿನಿಂದ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಆನ್‌ಲೈನ್ ಸೇವೆ ಹೆಚ್ಚಿಸಿ ನೇರವಾಗಿ ಫಲಾನುಭವಿಗೆ ಸೇವೆ ಸಿಗುವಂತೆ ಮಾಡಿದ್ದಾರೆ. ಸೇವೆ ಹೆಸರಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಪೋಲು ಮಾಡುತ್ತಿದ್ದ ಕೋಟಟ್ಯಂತರ ರೂ. ಅನುದಾನ ಉಳಿಸಿದ್ದಾರೆ. ಎಂಆರ್‌ಡಬ್ಲೂೃ, ವಿಆರ್‌ಡಬ್ಲೂೃಗಳ ಬೇಡಿಕೆ ಈಡೇರಿಸಿದ್ದಾರೆ. ಅಂಥ ಅಧಿಕಾರಿಯನ್ನು ವರ್ಗಾವಣೆ ಮಾಡಲು ಮುಂದಾಗಿರುವುದು ಸರಿಯಲ್ಲವೆಂದು ಆಗ್ರಹಿಸಿದರು.
ಲತಾ ಕುಮಾರಿ ಅವರನ್ನು ನಿರ್ದೇಶಕಿಯಾಗಿ ಮುಂದುವರೆಸಬೇಕು. ಎಂಆರ್‌ಡಬ್ಲೂೃ, ವಿಆರ್‌ಡಬ್ಲೂೃಗಳನ್ನು ಕಾಯಂಗೊಳಿಸಬೇಕು. ನಿವೃತ್ತಿ ಇಡಿಗಂಟು ಯೋಜನೆ ಜಾರಿಗೊಳಿಸಬೇಕು. ಗ್ರಾಮೀಣ ಪುನರ್ವಸತಿ ಯೋಜನೆ ನಿಯಮ ತಿದ್ದುಪಡಿಗೊಳಿಸಬೇಕು. ವಿಕಲಚೇತನರಿಗಾಗಿ ಪ್ರತ್ಯೇಕ ಸಚಿವಾಲಯ ರಚಿಸಬೇಕು. ಎಲ್ಲ ವಿಕಲಚೇತನರಿಗೆ ರಾಜ್ಯಾದ್ಯಂತ ಉಚಿತ ಬಸ್‌ಪಾಸ್ ವಿತರಿಸಬೇಕು. ಪುನರ್ವಸತಿ ಕಾರ್ಯಕರ್ತರಿಗೆ ಸ್ಥಳೀಯ ಸಂಸ್ಥೆಗಳಿಂದ ಸಾರಿಗೆ ವೆಚ್ಚ ಭರಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಬಸವನಗೌಡ ಬನ್ನಪ್ಪಗೌಡ, ಮಲ್ಲಿಕಾರ್ಜುನ ಹೊಸಕೇರಾ, ದವಲ್‌ಬಿ, ಈರಣ್ಣ ಕರೇಕುರಿ, ಹನುಮಾಕ್ಷಿ ಹಣಗಿ, ಶಂಭುಲಿಂಗಯ್ಯ, ನೇತ್ರಾವತಿ, ಭರಮಪ್ಪ, ಬಸವರಾಜ ಮುತ್ತಾಳ, ಉಮಾ ಇಂಡಿ ಇತರರಿದ್ದರು.