ಬಳ್ಳಾರಿ : ಸಿವಿಲ್ ಲಾರಿಗಳ ಸರಕು ಸಾಗಾಣಿಕಾ ದರ ಹೆಚ್ಚಿಸಬೇಕು ಹಾಗೂ ಸರ್ಕಾರಿ ನಿಯಮದಂತೆ ಕೈಗಾರಿಕೆಗಳು ದರ ಪಾವತಿಸಬೇಕು ಎಂದು ಆಗ್ರಹಿಸಿ ನಗರದ ಹೊರವಲಯದ ಹಲಕುಂದಿ ಮಠದ ಬಳಿ ಬಳ್ಳಾರಿ ಲಾರಿ ಮಾಲೀಕರ ಸಂಘದಿಂದ ಅನಿರ್ದಿಷ್ಠಾವಧಿ ಪ್ರತಿಭಟನಾ ಧರಣಿ ಗುರುವಾರ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಾಲಿಕೆ ಸದಸ್ಯ ಎಂ. ಪ್ರಭಂಜನ ಕುಮಾರ ಮಾತನಾಡಿ, ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಸರಕುಗಳನ್ನು ತುಂಬಿಕೊಂಡ ಜಿಲ್ಲೆಗೆ ಬಂದ ಲಾರಿಗಳು, ಮರಳಿ ಇಲ್ಲಿಂದ ತೆರಳುವ ವೇಳೆ ಕಡಿಮೆ ದರಕ್ಕೆ ಸಾಮರ್ಥ್ಯ ಮೀರಿ ಎರಡುಪಟ್ಟು ಸರಕು ತುಂಬಿಕೊಂಡು ಹೋಗುತ್ತವೆ. ಅದೇ ದರಕ್ಕೆ ಸರಕು ಸಾಗಣಿಕೆ ಮಾಡಿ ಎಂದು ಸ್ಥಳಿಯ ಲಾರಿ ಮಾಲೀಕರಿಗೆ ಇಲ್ಲಿನ ಕೈಗಾರಿಕಾ ಉದ್ಯಮಿಗಳು ಹೇಳುತ್ತಿದ್ದಾರೆ. ಅಲ್ಲದೇ, ಸರಕು ಸಾಗಣಿಕೆ ಟನ್‌ಗೆ ಇಂತಿಷ್ಟು ಎಂದು ಸರ್ಕಾರ ನಿಗದಿಪಡಿಸಿರುವ ದರ ಕೂಡ ನೀಡುತ್ತಿಲ್ಲ ಎಂದರು. ಜಿಲ್ಲೆಯಲ್ಲಿ ಸುಮಾರು 2 ಸಾವಿರ ಲಾರಿಗಳು ಇವೆ. ಪ್ರತಿದಿನ ಅನ್ಯ ರಾಜ್ಯಗಳಿಂದ ಸರಿಸುಮಾರು 4-5 ಸಾವಿರ ಲಾರಿಗಳು ಸರಕು ಹೊತ್ತು ಬರುತ್ತವೆ. ಸರ್ಕಾರಿ ನಿಯಮದಂತೆ ಪ್ರತಿ ಟನ್‌ಗೆ 1250 ರೂ. ಬಾಡಿಗೆ ನೀಡಬೇಕು. ಆದರೆ, ಹೊರ ರಾಜ್ಯಗಳ ಲಾರಿಗಳು ವಾಪಸ್ ತೆರಳುವಾಗ ಟನ್ ಸರಕನ್ನು 950ಕ್ಕೆ ಸಾಗಿಸುತ್ತವೆ. ಓವರ್‌ಲೋಡ್ ತುಂಬಿಕೊಂಡು ತೆರಳುವುದರಿಂದ ನಷ್ಟ ಸರಿದೂಗಿಸಿಕೊಳ್ಳುತ್ತಾರೆ. ಆದರೆ, ಅದೇ 950 ರೂ. ಬಾಡಿಗೆ ದರವನ್ನು ಕೈಗಾರಿಕೆಗಳವರು ಸ್ಥಳೀಯರಿಗೂ ನೀಡುವುದಾಗಿ ತಿಳಿಸುತ್ತಿರುವುದು ಸರಿಯಲ್ಲ. ಬೆಲೆ ಕಡಿಮೆಯಾಗಿದ್ದರಿಂದ ಲಾರಿಗಳ ಪ್ರತಿ ತಿಂಗಳ ಕಂತು ಪಾವತಿಸಲು ಕಷ್ಟವಾಗುತ್ತಿದೆ ಎಂದರು. ಹಾಗಾಗಿ ಕೂಡಲೇ ಸ್ಥಳೀಯ ಕೈಗಾರಿಕೆಗಳ ಮಾಲೀಕರು ಈ ಕುರಿತು ಎಚ್ಚೆತ್ತುಕೊಂಡು ಸರಕು ಸಾಗಾಣಿಕಾ ದರವನ್ನು ಸರ್ಕಾರದ ನಿಯಮದಂತೆ ನೀಡಬೇಕು ಎಂದು ಆಗ್ರಹಿಸಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಡಿಸಿ ಪ್ರಶಾಂತಕುಮಾರ ಮಿಶ್ರಾ, ಸಂಘದಿಂದ ಬೇಡಿಕೆಗಳ ಕುರಿತು ಮಾಹಿತಿ ಪಡೆದರು. ಕಾರ್ಖಾನೆ ಮಾಲೀಕರ ಸಭೆ ಕರೆದು ಚರ್ಚಿಸುವೆ ಮುಷ್ಕರವನ್ನು ಹಿಂಪಡೆಯುವಂತೆ ಮನವೊಲಿಸಲು ಯತ್ನಿಸಿದರು. ಇದಕ್ಕೆ ಒಪ್ಪದ ಲಾರಿ ಮಾಲೀಕರ ಸಂಘ ಒಪ್ಪಲು ನಿರಾಕರಿಸಿತು. ಪ್ರತಿಭಟನೆ ಹಿನ್ನಲೆ ನಗರ ಸೇರಿ ಹೊರರಾಜ್ಯಗಳಿಂದ ಬಂದಿದ್ದ ಎಲ್ಲ ಲಾರಿಗಳು, ಯಾವುದೇ ಸರಕು ಸಾಗಿಸದಂತೆ ಎಲ್ಲ ಲಾರಿಗಳನ್ನು ನಗರ ಹೊರವಲಯದ ಪ್ರತಿಭಟನಾ ಸ್ಥಳದಲ್ಲೆ ನಿಲುಗಡೆ ಮಾಡಲಾಗಿತ್ತು. ಸುಮಾರು 150ಕ್ಕೂ ಹೆಚ್ಚು ಲಾರಿಗಳನ್ನು ನಿಲ್ಲಿಸಲಾಗಿತ್ತು.