ಜಿಲ್ಲೆ

ವಿವಿಧ ಬೇಡಿಕೆಗಳ ಈಡೇರಿಸುವಂತೆ ಪ್ರತಿಭಟನೆ

*ಅಕ್ರಮ ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹ

ಚಾಮರಾಜನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಪಣ್ಯದಹುಂಡಿ ಗ್ರಾಮಸ್ಥರ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ತಾಲೂಕಿನ ಪಣ್ಯದಹುಂಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಮಾತನಾಡಿ, ಪಣ್ಯದಹುಂಡಿ, ಹೆಗ್ಗೋಠಾರ, ಮುತ್ತಿಗೆ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಸೇರಿದ ಅಂದಾಜು 250 ಹೆಕ್ಟರ್ ಸರ್ಕಾರಿ ಗೋಮಾಳವನ್ನು ಅತಿಕ್ರಮಣ ಮಾಡಿಕೊಂಡು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಹಲವು ವರ್ಷಗಳಿಂದ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.

ಈ ಭಾಗದ ರಸ್ತೆಗಳಲ್ಲಿ ಅಧಿಕ ಭಾರ ತುಂಬಿಕೊಂಡು ಟಿಪ್ಪರ್‌ಗಳು ಓಡಾಡುತ್ತಿರುವುದರಿಂದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಮನೆಗಳು ಸಹ ಬಿರುಕು ಬಿಟ್ಟಿದೆ. ಅಲ್ಲದೇ ಜನರು ಭಯದಿಂದಲೇ ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮವಹಿಸಬೇಕು. ಇಲ್ಲದ್ದಿದ್ದಲ್ಲಿ ಫೆ. 7 ರಂದು ಜಿಲ್ಲೆಗೆ ಬರಲು ಅವಕಾಶ ನೀಡುವುದಿಲ್ಲ. ಸಚಿವ ಸಂಪುಟ ಸಭೆಯನ್ನು ಸಹ ಧಿಕ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಹೆಗ್ಗೋಠಾರ ವಿಜಯ್‌ಕುಮಾ‌ರ್ ಮಾತನಾಡಿ, ಹೈಕೋರ್ಟ್ ಆದೇಶವನ್ನು ಪಾಲಿಸಲು ಇಲ್ಲಿನ ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ವಿಫಲವಾಗಿದ್ದಾರೆ. ಹಾಗಾಗಿ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬಂದು ನಮ್ಮ ಅಹವಾಲನ್ನು ಸ್ವೀಕಾರ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಲಾಜಿಪುರ ಕುಮಾರ್, ಪದಾಧಿಕಾರಿಗಳಾದ ಮರಿಸ್ವಾಮಪ್ಪ, ಶಿವಲಿಂಗೇಗೌಡ, ಮಾದಪ್ಪ, ಚಿನ್ನಸ್ವಾಮಿ, ನಾಗರಾಜಮೂರ್ತಿ, ಸ್ವಾಮಿ, ಸಂತೋಷ್, ಮಹೇಶ್, ಭಾಗ್ಯಮ್ಮ, ರೂಪ, ಕವಿತ, ಸವಿತ, ಶಾರದಮ್ಮ. ಪಾರ್ವತಿ, ಪವಿತ್ರ ಸೇರಿದಂತೆ ಇತರರು ಭಾಗವಹಿಸಿದ್ದರು.