ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ನಗರದ ತಾಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಕಾರ್ಮಿಕ ತಿದ್ದುಪಡಿ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿ ಮಾಡಬಾರದು. ರಸಗೊಬ್ಬರದ ಕೊರತೆಯನ್ನು ಸರಿಪಡಿಸಬೇಕು. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಬೇಕು.
70 ವರ್ಷದಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಭೂ ಮಂಜೂರಾತಿ ನೀಡಬೇಕು. ಭೂವ್ಯಾಜ್ಯಗಳ ಭೂದಾಖಲಾತಿ ದುರಸ್ತಿ ಕಾರ್ಯವನ್ನು ಕಾಲಮಿತಿ ಒಳಗೆ ಪೂರ್ಣಗೊಳಿಸಬೇಕು. ಕೆರೆಕಟ್ಟೆಗಳ ಒತ್ತುವರಿ ತೆರವುಗೊಳಿಸಬೇಕು. ರೈತರ ಭೂಮಿಗೆ ಸಂಪರ್ಕ ರಸ್ತೆಯನ್ನು ಕಲ್ಪಿಸಿ ಕೊಡುವ ಕಾಯಿದೆಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.
ದೇವನಹಳ್ಳಿ ಚನ್ನರಾಯಪಟ್ಟಣದ 13 ಹಳ್ಳಿಗಳ 1,777 ಎಕರೆ ಭೂಸ್ವಾಧೀನವನ್ನು ಸರ್ಕಾರವು ಕೈಬಿಟ್ಟಿರುವ ಕ್ರಮ ಸ್ವಾಗತಾರ್ಹ. ಈ ಕುರಿತು ಗೆಜೆಟ್‌ನಲ್ಲಿ ಪ್ರಕಟಿಸಬೇಕು. ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಮುಂಬರುವ ಅಧಿವೇಶನದಲ್ಲಿ ವಾಪಸ್ ಪಡೆಯಬೇಕು. ಎಪಿಎಂಸಿ ಕಾಯ್ದೆಯನ್ನು ಮತ್ತಷ್ಟು ರೈತಪರ ಗಟ್ಟಿಗೊಳಿಸಬೇಕು. ಕೃಷಿ ಮಾರುಕಟ್ಟೆ ನೀತಿಯನ್ನು ತಿರಸ್ಕರಿಸಬೇಕು. ವಿದ್ಯುತ್ ಖಾಸಗೀಕರಣವನ್ನು ರಾಜ್ಯದಲ್ಲಿ ಜಾರಿಗೆ ತರಬಾರದು ಎಂದು ಒತ್ತಾಯಿಸಿದರು.
ರೈತರ ಪಂಪ್‌ಸೆಟ್ ಸಂಪರ್ಕವನ್ನು ಸಕ್ರಮಗೊಳಿಸಬೇಕು. ಈ ಮೊದಲು ನಿಗದಿ ಪಡಿಸಿದ ದರದಂತೆ ಹಣ ಕಟ್ಟಲು ಆದೇಶ ಮಾಡಬೇಕು. ಮೈಸೂರು ತಾಲೂಕಿನ ಕೆಂಚಲಗೂಡು ಗ್ರಾಮದ ಸರ್ವೇ ನಂ.14ರಲ್ಲಿ 5 ಎಕರೆ 20 ಗುಂಟೆ ಜಮೀನನ್ನು ಉಳುಮೆ ಮಾಡುತ್ತಿದ್ದ ರೈತರಿಗೆ ನಿವೇಶನಕ್ಕಾಗಿ ಕಾಯ್ದಿರಿಸಿರುವ ಅದೇ ಜಾಗವನ್ನು ಎಡಹಳ್ಳಿ ಗ್ರಾಮಸ್ಥರಿಗೆ ಸ್ಮಶಾನಕ್ಕೆ ನೀಡಿರುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಮೈಸೂರು ತಾಲೂಕಿನ ಕೋಚನಹಳ್ಳಿ ಗ್ರಾಮದ ಸುಮಾರು 400 ಎಕರೆ ಜಮೀನನ್ನು ಗಾಲ್ಫ್ ಕಂಪನಿ ಜಮೀನು ಖರೀದಿಸಿ ಕೆಐಎಡಿಬಿಗೆ ಮಾರಾಟ ಮಾಡಿ ಮೂಲ ರೈತರಿಗೆ ಅನ್ಯಾಯವಾಗಿದೆ. ಇದರ ವಿರುದ್ಧ ಹೋರಾಟ ನಡೆಯುತ್ತಿದೆ. ಇದರ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಗುರೂರು ಗ್ರಾಮದ ಸವೇ ನಂ. 35ರ ಜಮೀನನ್ನು ಉಳುಮೆ ಮಾಡದಿದ್ದ ರೈತರಿಗೆ ಖಾತೆ ಮಾಡಿಕೊಡಲು ವಿಳಂಬವಾಗುತ್ತಿದೆ. ಈ ಸಮಸ್ಯೆಯನ್ನು ಅದಷ್ಟು ಬೇಗ ಪರಿಹರಿಸಬೇಕು. ಸರ್ಕಾರಿ ಜಮೀನುಗಳನ್ನು ಭೂ ಕಬಳಿಕೆ ವಿರುದ್ಧ ದಾವೆಗಳಿದ್ದು, ದಾವೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿ ಸರ್ಕಾರಿ ಜಮೀನುಗಳನ್ನು ವಶಪಡಿಸಿಕೊಳ್ಳಬೇಕು ಆಗ್ರಹಿಸಿದರು.
ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಮುಖಂಡರಾದ ಪಿ.ಮರಂಕಯ್ಯ, ಮೈ.ನಾಗನಹಳ್ಳಿ ವಿಜೇಂದ್ರ, ಚಿಕ್ಕನಹಳ್ಳಿ ಪೈಲ್ವಾನ್ ವೆಂಕಟೇಶ್, ಆನಂದೂರು ಪ್ರಭಾಕರ್, ಮಂಡಕಳ್ಳಿ ಮಹೇಶ್, ಕಲ್ಲೂರು ನಾಗನಹಳ್ಳಿ ಚಂದ್ರಶೇಖರ್, ಚಿಕ್ಕನಗಹಳ್ಳಿ ಎ.ರಾಘವೇಂದ್ರ, ಬಸವ ನಾಯಕ್, ಮೈದನಹಳ್ಳಿ ಮಹೇಶ್ ಇನ್ನಿತರರಿದ್ದರು.