ಚಿತ್ರದುರ್ಗ: ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ-ರಾಷ್ಟ್ರೀಯ ಜೀವನೋಪಾಯ ಅಭಿಯಾನ (ಸಂಜೀವಿನಿ ಯೋಜನೆ) ಯಡಿ ಕಾರ್ಯನಿರ್ವಹಿಸುತ್ತಿರುವ ಗ್ರಾಪಂ ಮಟ್ಟದ ಒಕ್ಕೂಟಗಳ ಮುಖ್ಯಪುಸ್ತಕ ಬರಹಗಾರರು, ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು, ಕೃಷಿ-ಪಶು ಇಲಾಖೆ ಸಖಿಯರು ಸೋಮವಾರ ಪ್ರತಿಭಟನೆ ನಡೆಸಿದರು.
ನ್ಯಾಯಯುತವಾದ ವಿವಿಧ ಬೇಡಿಕೆಗಳ ಈಡೇರಿಕೆಗೆ ಜಿಲ್ಲಾಡಳಿತಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಗ್ರಾಪಂ ಮಟ್ಟದಲ್ಲಿ ಸ್ವ-ಸಹಾಯ ಗುಂಪುಗಳ ಒಕ್ಕೂಟ ರಚಿಸಿಕೊಂಡು, ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ವೇತನ ಹೆಚ್ಚಳವಾಗಿಲ್ಲ ಎಂದು ಅಳಲು ತೋಡಿಕೊಂಡರು.
ಮುಖ್ಯಪುಸ್ತಕ ಬರಹಗಾರರಿಗೆ ಮಾಸಿಕ 20 ಸಾವಿರ ರೂ, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಗೆ 15 ಸಾವಿರ ರೂ. ವೇತನ ಹೆಚ್ಚಿಸಬೇಕು. ಸರ್ಕಾರದಿಂದ ನೇರವಾಗಿ ಬ್ಯಾಂಕ್ ಖಾತೆಗಳಿಗೆ ವೇತನ ಜಮೆಯಾಗಬೇಕು. ವೇತನ ಸಹಿತ ಹೆರಿಗೆ ರಜೆ ಮಂಜೂರು ಮಾಡಬೇಕು. ಪಿಎಫ್ ಸೌಲಭ್ಯ ಒದಗಿಸಬೇಕು ಎಂದು ಕೋರಿದರು.
ವೀರವನಿತೆ ಒನಕೆ ಓಬವ್ವ ಸಂಜೀವಿನಿ ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುನಿತಾ, ಕಾರ್ಯದರ್ಶಿ ಸಿ.ವಿಂದ್ಯಾ, ಖಜಾಂಚಿ ವನಿತಮ್ಮ, ಅನಿತಾ, ಮಂಜುಳಾ, ನಿರ್ಮಲಾ, ಉಷಾ, ತ್ರಿವೇಣಿ, ಸೌಮ್ಯಾ, ಬಸಮ್ಮ, ರಾಧಾ ಇತರರಿದ್ದರು.