ಬೇಲೂರು: ವೃಂದ ಮತ್ತು ನೇಮಕಾತಿ ತಿದ್ದುಪಡಿಯಾಗದೆ ವರ್ಗಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ (ಪಿಎಸ್‌ಟಿ) ಖಾಲಿ ಹುದ್ದೆ ತೋರಿಸುವಲ್ಲಿ ಅನ್ಯಾಯ ಎಸಗಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಿನ ಪದಾಧಿಕಾರಿಗಳು ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ಬಿ.ಪಾಲಾಕ್ಷ ಮಾತನಾಡಿ, ವೃಂದ ಮತ್ತು ನೇಮಕಾತಿ ನಿಯಮ ಜಾರಿಗೆ ಬಂದಾಗಿನಿಂದ ಪ್ರಾಥಮಿಕ ಶಾಲಾ ಶಿಕ್ಷಕರು 1 ರಿಂದ 7ನೇ ತರಗತಿವರೆಗೆ ಬೋಧಿಸಲು ನೇಮಕವಾಗಿದ್ದರೂ 1ರಿಂದ 5ರವರೆಗೆ ಮಾತ್ರ ಬೋಧಿಸಲು ಸೀಮಿತಗೊಳಿಸಿದ್ದಾರೆ. ಜತೆಗೆ ಹಿಂಬಡ್ತಿ ವಿಚಾರವಾಗಿ ಮೇಲಧಿಕಾರಿಗಳು ಮತ್ತು ಸಚಿವರಲ್ಲಿ ಮನವಿ ಮಾಡಿದರೂ ಪ್ರಾಥಮಿಕ ಶಾಲಾ ಶಿಕ್ಷಕರಿಗಾದ ಅನ್ಯಾಯ ಸರಿಪಡಿಸಿಲ್ಲ ಎಂದರು.
ಸಂಘದ ಗೌರವಾಧ್ಯಕ್ಷ ಮಂಜುನಾಥ್.ಡಿ.ವಿ, ಪ್ರಧಾನ ಕಾರ್ಯದರ್ಶಿ ರಘುಕುಮಾರ್, ಉಪಾಧ್ಯಕ್ಷರಾದ ರಾಘವೇಂದ್ರ, ಜಯಶ್ರೀ, ಖಜಾಂಚಿ ಧರ್ಮಭೋವಿ, ಸಹ ಕಾರ್ಯದರ್ಶಿ ಲತಾ, ರೂಪಾ, ಕುಮಾರಸ್ವಾಮಿ, ಆನಂದಕುಮಾರ್, ಲಕ್ಷ್ಮಣ್, ಲೋಕೇಶ್, ಸುಧಾಮಣಿ ಸೇರಿದಂತೆ ಇತರರಿದ್ದರು.