ಕೊಳ್ಳೇಗಾಲ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಯಿತು
ತಾಲೂಕು ಕಚೇರಿ ಮುಂಭಾಗ ಜಮಾಯಿಸಿದ ರೈತ ಸಂಘದ 50ಕ್ಕೂ ಹೆಚ್ಚು ಪದಾಧಿಕಾರಿಗಳು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೆಳೆ ಹಾನಿ ಪರಿಹಾರ ನೈಜ ರೈತರ ಕೈ ಸೇರುತ್ತಿಲ್ಲ. ಟಿಸಿ ಕೆಟ್ಟು ಹೋಗಿ ತಿಂಗಳುಗಳೇ ಕಳೆದರೂ ದುರಸ್ತಿಗೊಂಡಿಲ್ಲ. ಕಾಡು ಪ್ರಾಣಿಗಳ ದಾಳಿಗೆ ಜೀವ ತೆತ್ತ ಜನರು ಹಾಗೂ ಜಾನುವಾರುಗಳಿಗೆ ಪರಿಹಾರ ದೊರೆಯುತ್ತಿಲ್ಲ ಎಂದು ದೂರುಗಳ ಸುರಿಮಳೆಗೈದರು.
ಸ್ಥಳಕ್ಕಾಗಮಿಸಿದ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಂದ್ರಮ್ಮ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಹಸಿರು, ಉದ್ದು, ಅಲಂಸದೆ, ಎಳ್ಳು ಬಿತ್ತನೆಯಾಗಿತ್ತು. ವಾಡಿಕೆಯಷ್ಟು ಮಳೆ ಬೀಳದ ಕಾರಣ ಅನೇಕ ಕಡೆ ಬೆಳೆ ಹೊಣಗಿದೆ. ತೇವಾಂಶ ಕೊರತೆಯಿಂದ ಬೆಳೆ ಹಾನಿಯಾಗಿದೆ ಎಂದು ಇಲಾಖೆಗೆ ವರದಿ ಸಲ್ಲಿಸಿದ್ದೇವೆ. ಈಗಾಗಲೇ ಬೆಳೆ ವಿಮೆ ಕಟ್ಟಿಸಿಕೊಳ್ಳುತ್ತಿದ್ದೇವೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ರೈತ ಸಂಘದ ಪದಾಧಿಕಾರಿ ಅಣಗಳ್ಳಿ ಬಸವರಾಜು, ಮಳೆ ಬೀಳದೆ ರೈತರ ಬೆಳೆ ಒಣಗಿದೆ. ಈ ನಡುವೆ ವಿಮೆ ಕಟ್ಟಿಸಿಕೊಂಡರೆ ಏನು ಪ್ರಯೋಜನ. ಸರ್ಕಾರ ಬರಗಾಲ ಘೋಷಣೆ ಮಾಡಬೇಕು. ನಿಜವಾದ ರೈತನಿಗೆ ಪರಿಹಾರವೇ ಸಿಗವುದಿಲ್ಲ. ನೀವು ಸರ್ವೇ ಮಾಡಿಸುವ ತನಕ ಜಮೀನಿನಲ್ಲಿ ಬೆಳೆಯೇ ಇರುವುದಿಲ್ಲ. ಈ ಹಿಂದೆ ಪ್ರವಾಹದಲ್ಲಿ ಹಾನಿಯಾದ ಬೆಳೆಗೆ ಸಮರ್ಪಕವಾಗಿ ಪರಿಹಾರ ಸಿಕ್ಕಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಮಳೆ ಬಂದಿಲ್ಲ ಬರಗಾಲ ಘೋಷಣೆ ಮಾಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೀರಾ ಎಂಬ ರೈತರ ಪ್ರಶ್ನೆಗೆ ತಹಸಿಲ್ದಾರ್ ಮಂಜುಳಾ ಮಾತನಾಡಿ, ಸರ್ಕಾರದಿಂದ ನಮಗೆ ಸೂಚನೆ ಬಂದಿಲ್ಲ ಎನ್ನುತ್ತಿದಂತೆ ಅಕ್ರೋಶಗೊಂಡ ರೈತರು ರೈತರು ಮಳೆ ಇಲ್ಲದೆ ಕಂಗಾಲಾಗಿರುವುದು ನಿಮಗೆ ತಿಳಿದಿಲ್ಲವೇ, ರೈತರು ಹಲವೆಡೆ ಪ್ರತಿಭಟನೆ ಮಾಡುತ್ತಿದ್ದಾರೆ. ನೀವೇ ವರದಿ ನೀಡಿ ಬರಗಾಲ ಘೋಷಣೆ ಮಾಡುವಂತೆ ಮನವಿ ಮಾಡಿದರೇ ಏನು ತಪ್ಪು, ಬ್ಯಾಂಕ್‌ಗಳಿಂದ ರೈತರಿಗೆ ನೋಟಿಸ್ ನೀಡುತ್ತಿದ್ದಾರೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದಲ್ಲದೆ, ನೀವು ಕಂದಾಯ ಇಲಾಖೆಗೆ ಮಾತ್ರ ಅಧಿಕಾರಿಯಲ್ಲ ವಿವಿಧ ಇಲಾಖೆಯ ಸಮಸ್ಯೆಯನ್ನು ಪರಿಶೀಲಿಸಿ ಜನರಿಗೆ ಕೆಲಸ ಮಾಡಿಕೊಡಬೇಕು ಎಂದು ರೈತರು ಆಗ್ರಹಿಸಿದರು.
ಉಪವಿಭಾಗಧಿಕಾರಿ ಮಹೇಶ್ ಮಾತನಾಡಿ, 1 ವಾರದ ನಂತದ ವಿವಿಧ ಇಲಾಖೆ ಮೇಲಾಧಿಕಾರಿಗಳ ಕರೆಯಿಸಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವಹಿಸುತ್ತೇನೆ ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ಷಣ್ಮುಖಸ್ವಾಮಿ, ಕಾರ್ಯದರ್ಶಿ ರಾಮಕೃಷ್ಣ, ದಶರತ್, ಮಲ್ಲರಾಜು, ಲಕ್ಷಣ ಮೂರ್ತಿ, ಮಹದೇವಪ್ಪ, ಮೂರ್ತಿ ಇದ್ದರು.