ಜಿಲ್ಲೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಪ್ರತಿಭಟನೆ

 ಹಾಸನ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾಸನ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ರಾಜ್ಯ ಅಕ್ಷರ ದಾಸೋಹ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಯಶವಂತ್ ಅವರಿಗೆ ಮನವಿ ಸಲ್ಲಿಸಿದರು.

ಬಿಸಿಯೂಟ ನೌಕರರನ್ನು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ತಂದು ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಬೇಕಿದೆ. 2023ರ ಹಿಂದಿನ ಸರ್ಕಾರದ ಬಜೆಟ್‌ನಲ್ಲಿ ಬಿಸಿಯೂಟ ನೌಕರರಿಗೆ 1,000 ರೂ. ಗೌರವಧನ ಹೆಚ್ಚಳ ಮಾಡುವುದಾಗಿ ಘೋಷಿಸಿತ್ತು. ಆದರೆ ಈ ಗೌರವಧನ ಬಿಡುಗಡೆ ಆದೇಶ ಇನ್ನು ಆಗಿಲ್ಲ. ಕೂಡಲೇ ಆದೇಶ ಮಾಡಿ, ಹಣ ಬಿಡುಗಡೆ ಮಾಡಬೇಕು. ಅಕ್ಷರ ದಾಸೋಹ ಮಾರ್ಗಸೂಚಿಯಲ್ಲಿ 4 ಗಂಟೆ ಮಾತ್ರ ಕೆಲಸದ ಸಮಯವಿದೆ. ಆದರೆ, ನಾವು ದಿನಕ್ಕೆ ಸುಮಾರು 6 ಗಂಟೆಗಿಂತಲೂ ಅಧಿಕ ಸಮಯ ಕೆಲಸ ಮಾಡುತ್ತಿದ್ದೇವೆ. ನಮ್ಮ ಪರಿಶ್ರಮ ಗುರುತಿಸಿ ಕನಿಷ್ಠ ಕೂಲಿ 21 ಸಾವಿರ ರೂ. ನೀಡಬೇಕು. ಜತೆಗೆ ಮಾರ್ಗದರ್ಶಿ ಕೈಪಿಡಿಯಲ್ಲಿ 6 ಗಂಟೆ ಕೆಲಸ ಎಂದು ತಿದ್ದುಪಡಿ ಮಾಡಬೇಕು. ನಿವೃತ್ತಿ ಹೊಂದಿದ ಮತ್ತು ಹೊಂದುತ್ತಿರುವ ನೌಕರರಿಗೆ 1 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಬೇಕು ಎಂದು ಒತ್ತಾಯಿಸಿದರು.

ಹಲವಾರು ವರ್ಷಗಳಿಂದ ಈ ಯೋಜನೆಯ ಶ್ರೇಯಸ್ಸಿಗಾಗಿ ನಾವು ಯಾವುದೇ ಮೂಲಸೌಲಭ್ಯವಿಲ್ಲದೇ ದುಡಿಯುತ್ತಿದ್ದೇವೆ. ಒಂದು ವೇಳೆ ನಾವು ಅಕಸ್ಮಿಕ ಮರಣ ಹೊಂದಿದ್ದರೆ ನಮ್ಮ ಕುಟುಂಬದಲ್ಲಿ ಇರುವ ಓರ್ವ ಸದಸ್ಯರಿಗೆ ಈ ಕೆಲಸ ನೀಡಲು ಆದೇಶ ಮಾಡಬೇಕು. ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಏಪ್ರಿಲ್-ಮೇ ತಿಂಗಳ ವೇತನ ನೀಡಲಾಗುತ್ತದೆ. ಆದರೆ ಇದೇ ಇಲಾಖೆಯ ಅಡಿಯಲ್ಲಿ ಕೆಲಸ ಮಾಡುವ ನಮಗೆ ಏಪ್ರಿಲ್-ಮೇ ತಿಂಗಳ ಬೇಸಿಗೆ ರಜೆ ವೇತನ ನೀಡುವುದಿಲ್ಲ. ಅಕ್ಟೋಬರ್ ತಿಂಗಳ ದಸರಾ ರಜಾ ವೇತನ ಸಹ ನೀಡುವುದಿಲ್ಲ. ಈ ವೇತನವನ್ನು ನಮಗೂ ನೀಡುವಂತಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು

ಅಡುಗೆ ನೌಕರರನ್ನು ಮಾರ್ಚ್ 31ಕ್ಕೆ ಅಧಿಕೃತವಾಗಿ ಇಲಾಖೆಯ ಆದೇಶದಂತೆ ಬಿಡುಗಡೆ ಮಾಡುತ್ತಾರೆ. ಆದರೆ ಏಪ್ರಿಲ್ 10ರ ವರೆಗೆ ಕೆಲಸ ಮಾಡಿಸುತ್ತಾರೆ. ಇವರು ಕರ್ತವ್ಯ ನಿರ್ವಹಿಸುವ ಹಾಗೆ ಮಾ.31ರ ಬದಲು ಏಪ್ರಿಲ್ 10 ಎಂದು ಆದೇಶವಾಗಬೇಕು. ಬಿಸಿಯೂಟ ಯೋಜನೆಯ ಜವಾಬ್ದಾರಿಯನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ನೀಡಬಾರದು. ಈಗಾಗಲೇ ಖಾಸಗಿ ಸಂಸ್ಥೆಗಳಿಗೆ ನೀಡಿದ ಶಾಲೆಗಳ ಬಿಸಿಯೂಟ ವಾಪಸ್ಸು ಪಡೆದು ಸರ್ಕಾರವೇ ಊಟ ನೀಡುವಂತಾಗಬೇಕು. ಮತ್ತು ಒಂದು ಶಾಲೆಯಲ್ಲಿ 2 ಜನ ಅಡುಗೆಯವರು ಕೆಲಸ ನಿರ್ವಹಿಸಲು ಅನುಕೂಲ ಮಾಡಿಕೊಡಬೇಕು ಹಾಗೂ ಅಡುಗೆ ಕೆಲಸದ ಜತೆಗೆ ಶಾಲಾ ಸ್ವಚ್ಛತೆ, ಕೈತೋಟ ನಿರ್ವಹಣೆ, ಶಾಲಾ ಸಮಯದ ಗಂಟೆ ಬಾರಿಸುವುದು, ಇನ್ನಿತರ ಕೆಲಸ ಚಾಚುತಪ್ಪದೇ ಮಾಡುತ್ತಿರುವುದರಿಂದ ನಮ್ಮನ್ನು ಡಿ ಗ್ರೂಪ್ ನೌಕರರಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಅಧ್ಯಕ್ಷರಾದ ಎಂ.ಬಿ. ಪುಷ್ಪಾ, ಜಿಲ್ಲಾಧ್ಯಕ್ಷೆ ಮೀನಾಕ್ಷಿ, ಖಜಾಂಚಿ ನಾಗರತ್ನಾ, ಲೋಲಾಕ್ಷಿ ಹಾಗೂ ಸಿಐಟಿಯು ಮುಖಂಡ ಅರವಿಂದ್ ಸೇರಿದಂತೆ ಇತರರು ಭಾಗವಹಿಸಿದ್ದರು.

----