ಮಳವಳ್ಳಿ ಪಟ್ಟಣದ ತಾಪಂ ಕಚೇರಿ ಮುಂದೆ ಅಕ್ಷರ ದಾಸೋಹ ನೌಕರರು ಮಂಗಳವಾರ ವಿವಿಧ ಬೇಡಿಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಮಹದೇವಮ್ಮ, ಸುನಂದಾ, ಶೋಭಾ ಇತರರು ಇದ್ದರು. 
ಜಿಲ್ಲೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಮಳವಳ್ಳಿ: ಬಿಸಿಯೂಟ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಸಮಿತಿ ವತಿಯಿಂದ ಮಂಗಳವಾರ ತಾಪಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಮಹದೇವಮ್ಮ ಮಾತನಾಡಿ, ಶಾಲೆಗಳಲ್ಲಿ ಎಲ್ಲ ಕೆಲಸ ನಿರ್ವಹಿಸಿ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಬಿಸಿಯೂಟ ನೌಕರರ ಪರಿಶ್ರಮವಿದ್ದು, ಕನಿಷ್ಠ 21 ಸಾವಿರ ರೂ. ವೇತನ ನಿಗದಿ ಮಾಡಬೇಕು. ಹಿಂದಿನ ಸರ್ಕಾರದ ಬಜೆಟ್‌ನಲ್ಲಿ ಬಿಸಿಯೂಟ ನೌಕರರಿಗೆ ಘೋಷಣೆ ಮಾಡಿದ್ದ ಒಂದು ಸಾವಿರ ರೂ. ಗೌರವಧನ ಬಿಡುಗಡೆ ಮಾಡಬೇಕು. ನಿವೃತ್ತಿ ಹೊಂದಿದ ನೌಕರರಿಗೆ 1 ಲಕ್ಷ ರೂ. ಪರಿಹಾರ, ಅಕಾಲಿಕವಾಗಿ ಮರಣ ಹೊಂದಿದ ನೌಕರರ ಕುಟುಂಬದ ಸದಸ್ಯರಿಗೆ ಕೆಲಸ ನೀಡುವುದು, ಬೇಸಿಗೆ ಮತ್ತು ದಸರಾ ರಜೆಗಳ ವೇತನ ನೀಡಬೇಕೆಂದು ಒತ್ತಾಯಿಸಿದರು.

ತಾಲೂಕು ಪಂಚಾಯಿತಿ ಅಕ್ಷರ ದಾಸೋಹ ಪ್ರಭಾರ ಸಹಾಯಕ ನಿರ್ದೇಶಕ ಮಹದೇವು ಅವರು ಮನವಿ ಸ್ವೀಕರಿಸಿ ಸಂಬಂಧಪಟ್ಟವರ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು. ತಾಲೂಕು ಅಧ್ಯಕ್ಷೆ ಸುನಂದಾ, ಕಾರ್ಯದರ್ಶಿ ಶೋಭಾ ಸೇರಿದಂತೆ ಇತರರು ಇದ್ದರು.