ಜಿಲ್ಲೆ

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

ಚಾಮರಾಜನಗರ: ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಮುಂಬರುವ ಅಧಿವೇಶನದಲ್ಲಿ ವಾಪಸ್ಸು ಪಡೆಯಬೇಕು ಹಾಗೂ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಜನನ ಮಂಟಪದ ಸಮೀಪದಲ್ಲಿರುವ ರೈತ ಸಂಘದ ಕಚೇರಿಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಮೆರವಣಿಗೆ ಹೊರಟು ಶ್ರೀ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ತಾಲೂಕು ಕಚೇರಿಗೆ ಸಾಗಿ ಕೆಲಕಾಲ ಧರಣಿ ನಡೆಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಮುಂಬರುವ ಅಧಿವೇಶನದಲ್ಲಿ ವಾಪಸ್ಸು ಪಡೆಯಬೇಕು. ಎಪಿಎಂಸಿ ಕಾಯ್ದೆಯನ್ನು ಮತ್ತಷ್ಟು ರೈತಪರಗೊಳಿಸಬೇಕು. ಕೇಂದ್ರ ನ್ಯಾಷನಲ್ ಕೃಷಿ ಮಾರುಕಟ್ಟೆ ಪ್ರೇಮ್ ವರ್ಕ್ ನೀತಿಯನ್ನು ತಿರಸ್ಕರಿಸಬೇಕು. ವಿದ್ಯುತ್ ಖಾಸಗೀಕರಣವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ರೈತರು ಬೆಳೆದಿರುವ ಕಬ್ಬನ್ನು ಯಾವುದೇ ರಾಜ್ಯ, ಅಂತರಾಜ್ಯಗಳಿಗೆ ಸಾಗಿಸಲು ಕಬ್ಬು ಸಾಗಾಣೆ ಮಾಡಲು ಯಾರ ಅನುಮತಿಯು ಅಗತ್ಯವಿಲ್ಲ. ಅನಿರೀಕ್ಷಿತವಾಗಿ ಅಧಿಕಾರಿಗಳಿಂದಾಗಲಿ ಅಥವಾ ಕಾರ್ಖಾನೆಗಳಿಂದಾಗಲಿ ಅಡ್ಡಿಯುಂಟು ಮಾಡಿದ್ದಲ್ಲಿ, ಆ ರೈತನಿಗೆ ಆಗುವ ನಷ್ಟವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಬೇಕು. ವಿದ್ಯುತ್ ಪಂಪ್‌ಸೆಟ್‌ಗಳಿಗೆ ಹಿಂದೆ ಇದ್ದಂತೆ ಅಕ್ರಮ-ಸಕ್ರಮ ಅಡಿಯಲ್ಲಿ ಪರಿವರ್ತಕ ಮತ್ತು ವಿದ್ಯುತ್ ಸಂಪರ್ಕವನ್ನುವನ್ನು ಸಂರ್ಪೂಣವಾಗಿ ಒದಗಿಸಬೇಕು. ಕಾಡು ಪ್ರಾಣಿಗಳ ಹಾವಳಿಯಿಂದ ಉಂಟಾಗುವ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಹೇಶ್ ಪ್ರಭು, ಎಚ್.ಸಿ.ಮಹೇಶ್ ಕುಮಾರ್, ಸಿದ್ದರಾಜು, ಮೂಡ್ನಕೂಡು ಮಹೇಶ್, ಉಮೇಶ್, ಮಲಪ್ಪ, ಚಿನ್ನಸ್ವಾಮಿ, ನಾಗಮಲ್ಲು, ನಾರಾಯಣಸ್ವಾಮಿ, ಬಸವರಾಜು, ಮಹದೇವಸ್ವಾಮಿ, ಸುರೇಶ್, ಮಹೇಂದ್ರ, ಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.