ಚಾಮರಾಜನಗರ: ಚಳಿಗಾಲದ ಅಧಿವೇಶನದಲ್ಲಿ ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರನ್ನು ವರ್ಗ 3 ಮತ್ತು 4 ಎಂದು ಪರಿಗಣಿಸಿ ಖಾಯಂ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ನಾಗಮಣಿ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ನಾಗಮಣಿ ಮಾತನಾಡಿ, ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಕಾರ್ಯಕರ್ತೆ, ಸಹಾಯಕಿರನ್ನು ವರ್ಗ 3 ಮತ್ತು 4 ಎಂದು ಪರಿಗಣಿಸಿ ಖಾಯಂ ಮಾಡಬೇಕು. ಮಹಿಳಾ ಮಕ್ಕಳ ಇಲಾಖೆಯ 14 ಐಸಿಡಿ 2023ರ ಆದೇಶದ ಪ್ರಕಾರ ಕೂಡಲೇ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಬೇಕು. 2018 ರಿಂದ ಕೇಂದ್ರ ಸರ್ಕಾರ ಯಾವುದೇ ಗೌರವಧನ ಹೆಚ್ಚಳ ಮಾಡಿಲ್ಲವಾದ್ದರಿಂದ ಕೇಂದ್ರ ಸರ್ಕಾರವು 26 ಸಾವಿರ ರೂ.ಗಳಿಗೆ ಗೌರವಧನ ಹೆಚ್ಚಿಸಬೇಕು. ಎಂದು ಆಗ್ರಹಿಸಿದರು.
2023ರ ವಿಧಾನಸಭಾ ಚುನಾವಣೆಯ ಸಂಧರ್ಭದಲ್ಲಿ ಘೋಷಣೆ ಮಾಡಿದ 15 ಸಾವಿರ ರೂ. ಗಳಿಗೆ ಗೌರವಧನ ಹೆಚ್ಚಿಸಬೇಕು, ನಿವೃತ್ತಿಯಾದವರಿಗೆ ಇಡಗಂಟು ಅಥವಾ ಎನ್ ಪಿಎಸ್ ಹಣವನ್ನು ಹಾಗೂ ರೂ. 10 ಸಾವಿರ ಮಾಸಿಕ ಪಿಂಚಣಿಯನ್ನು ನೀಡಬೇಕು, .ಶಿಕ್ಷಣ ಇಲಾಖೆ, ಎಸ್ ಡಿಎಂಸಿ ಗಳಿಂದ ಪ್ರಾರಂಭ ಮಾಡಿರುವ ಎಲ್ ಕೆಜಿ, ಯುಕೆಜಿ ನಿಲ್ಲಿಸಿ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್ ಕೆಜಿ,ಯುಕೆಜಿ ಪ್ರಾರಂಭಿಸಬೇಕು. ಎಂದು ಒತ್ತಾಯಿಸಿದರು.
ಐಸಿಡಿಎಸ್ ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯಬೇಕು. ನಗರಸಭೆ, ನಗರಪಾಲಿಕೆ, ಮಹಾನಗರ ಪಾಲಿಕೆ, ವಿಧಾನಸಭೆ, ಲೋಕಸಭಾ ಚುನಾವಣೆಗಳು ಅಲ್ಲದೇ ಉಪಚುನಾವಣೆಗಳಲ್ಲಿ ಮತದಾರರನ್ನು ಗುರ್ತಿಸುವುದು, ಅನರ್ಹಗೊಳಿಸುವುದು, ಚುನಾವಣಾ ಸಂಧರ್ಭದಲ್ಲಿ ಚೀಟಿ ಹಂಚುವುದು, ಬೂತ್‌ಗಳಲ್ಲಿ ಕೆಲಸ ಮಾಡುವುದು ಮುಂತಾದ ಕೆಲಸಗಳಿಂದ ಅಂಗನವಾಡಿ ಕೇಂದ್ರದ ದಿನನಿತ್ಯದ ಕೆಲಸಗಳಲ್ಲಿ ಅಂಗನವಾಡಿ ನೌಕರರು ತೊಂದರೆ ಅನುಭವಿಸುತ್ತದ್ದಾರೆ. ಆದ್ದರಿಂದ ಅವರನ್ನು ಚುನಾವಣಾ ಕೆಲಸಗಳಿಂದ ಮುಕ್ತಿಗೊಳಿಸಬೇಕು. ಇಲಾಖೆ ಸಚಿವರು ಒಪ್ಪಿಕೊಂಡಂತೆ ಸಾಮೂಹಿಕ ಆರೋಗ್ಯ ವಿಮೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಖಜಾಂಚಿ ಜಿ.ಭಾಗ್ಯ, ಕಾರ್ಯದರ್ಶಿ ಶಾಯಿದಭಾನು, ಖಜಾಂಚಿ ಗುರುಲಿಂಗಮ್ಮ, ಸಂತೇಮರಹಳ್ಳಿ ಅಧ್ಯಕ್ಷೆ ಪಾರ್ವತಮ್ಮ, ಖಜಾಂಚಿ ಜಯಮಾಲ, ಕಾರ್ಯದರ್ಶಿ ತುಳಸಮ್ಮ, ಯಳಂದೂರು ಅಧ್ಯಕ್ಷೆ ಮೀನಾಕ್ಷಿ, ಖಜಾಂಚಿ ಕೆಂಪಮ್ಮ, ಗುಂಡ್ಲುಪೇಟೆ ಅಧ್ಯಕ್ಷೆ ಸುಜಿಯಾ, ಖಜಾಂಚಿ ಸುಮಿತ್ರ, ಕಾರ್ಯದರ್ಶಿ ಗುರುಮಲ್ಲಮ್ಮ, ಕೊಳ್ಳೇಗಾಲ ಅಧ್ಯಕ್ಷೆ ಶಾಂತಮ್ಮ, ಕಾರ್ಯದರ್ಶಿ ಸುಂದ್ರಮ್ಮ ಸದಸ್ಯರು ಭಾಗವಹಿಸಿದ್ದರು.