ದೇವನಹಳ್ಳಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಇತರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನೆ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದಲ್ಲಿ ತಾಲೂಕು ಅಂಗನವಾಡಿ ನೌಕರರ ಸಂಘ ಹಾಗೂ ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಉಪವಿಭಾಗಾಧಿಕಾರಿ ಅರುಳ್‌ಕುಮಾರ್‌ಗೆ ಮನವಿ ಸಲ್ಲಿಸಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿಕೆ.ಶಿವಪ್ಪ ಮಾತನಾಡಿ, ಅಂಗನವಾಡಿ ಹಾಗೂ ಬಿಸಿಯೂಟ, ಆಶಾ ಕಾರ್ಯಕರ್ತೆಯರು ಹೆಸರಿಗೆ ಮಾತ್ರ ಸೇವೆಗೆ ನಿಯುಕ್ತಿಗೊಂಡಿದ್ದಾರೆ. ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಆದರೆ ಕನಿಷ್ಠ ವೇತನ ನೀಡಲು ಸರ್ಕಾರ ಮುಂದಾಗುತ್ತಿಲ್ಲ. ನೀಡುವ ಗೌರವ ವೇತನವನ್ನೂ ನಿಗದಿತವಾಗಿ ನೀಡುತ್ತಿಲ್ಲ ಎಂದು ದೂರಿದರು.
ಅಖಿಲ ಭಾರತ ಸ್ಕೀಂ ನೌಕರರ ಮುಷ್ಕರದ ಅಂಗವಾಗಿ ದೇಶಾದ್ಯಂತ ಹೋರಾಟ ನಡೆಸಿ, ಮುಖ್ಯಮಂತ್ರಿಗಳು, ರಾಜ್ಯಪಾಲರು, ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.
ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಚ್.ಪುಪ್ಪಾವತಮ್ಮ ಮಾತನಾಡಿ, ಪ್ರತಿಭಟಿಸಿದಾಗ 50 -100 ರೂ. ಹೆಚ್ಚಳ ಮಾಡಲಾಗುತ್ತಿದೆ. ಆದರೆ ನಮಗೆ ಕನಿಷ್ಠ ವೇತನ ನೀಡಲು ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದರು.
ನಾಲ್ಕು ತಿಂಗಳಿಂದ ಮೊಟ್ಟೆ ಖರೀದಿ ಹಣ ಬಿಡುಗಡೆ ಮಾಡಿಲ್ಲ. ಇಂತಹ ಸ್ಥಿತಿಯಲ್ಲಿ ಮೊಟ್ಟೆ ವಿತರಣೆ ಮಾಡುವುದಾದರೂ ಹೇಗೆ?, ಬೇಡಿಕೆ ಈಡೇರಿಕೆ ಬಗ್ಗೆ ನಿರ್ಲಕ್ಷ್ಯವಹಿಸಿದರೆ ಸೆ.27 ರಂದು ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಬೆಂಬಲಿಸಿ ಅವರ ಜತೆಗುಡಿ ನಾವೂ ಕೂಡ ಬಂದ್‌ನಲ್ಲಿ ಭಾಗಿಯಾಗಿ ಪ್ರತಿಭಟಿಸಲಾಗುವುದು ಎಂದರು.
ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅನಸೂಯದೇವಿ, ಸಹಕಾರ್ಯದರ್ಶಿ ಕೆ.ಎಸ್.ಲೀಲಾವತಿ, ಪದಾಧಿಕಾರಿಗಳಾದ ಮೋಸಿನತಾಜ್, ಗೌರಮ್ಮ, ಪೂಜಮ್ಮ ಸರೋಜಾ, ಗಾಯತ್ರಿ, ಮಂಜುಳಾ, ಮೇರಿ, ಕ.ರಾ. ಅಕ್ಷರದಾಸೋಹ ನೌಕರರ ಸಂಘದ ಅಧ್ಯಕ್ಷೆ ರತ್ನಮ್ಮ, ಪ್ರಧಾನಕಾರ್ಯದರ್ಶಿ ಶೋಭಾ ಇತರರು ಇದ್ದರು.