ಚಾಮರಾಜನಗರ : ಮಾತು ತಪ್ಪಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರ್ತನೆ ಖಂಡಿಸಿ, ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ವತಿಯಿಂದ ಅ.5 ರಂದು ಮೈಸೂರಿಗೆ ಸಂಪರ್ಕ ಕಲ್ಪಿಸುವ ಎಂಟು ದಿಕ್ಕುಗಳಲ್ಲೂ ಹಸು, ಎತ್ತು, ಗಾಡಿ, ಟ್ರ್ಯಾಕ್ಟರ್, ಕುರಿ-ಕೋಳಿಗಳ ಸಮೇತ ರಸ್ತೆಗಿಳಿದು ಬೃಹತ್ ಚಳುವಳಿ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಎ.ಎಂ.ಮಹೇಶ್ ಪ್ರಭು ತಿಳಿಸಿದರು.
ರಾಜ್ಯ ರೈತ ಸಂಘದ ವತಿಯಿಂದ ಕಳೆದ ಜುಲೈ 11 ರಂದು ಮುಖ್ಯ ಮಂತ್ರಿ ಅವರ ಮನೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ರೈತರ ಸಮಸ್ಯೆಗಳನ್ನು ಒಂದು ವಾರದೊಳಗೆ ಬಗೆಹರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು. ಆದರೆ ಎರಡು ತಿಂಗಳು ಕಳೆದರೂ ರೈತರ ಸಮಸ್ಯೆಯನ್ನು ಮುಖ್ಯಮಂತ್ರಿ ಅವರು ಈಡೇರಿಸಿಲ್ಲ. ಹಾಗಾಗಿ ಇವರ ವರ್ತನೆಯನ್ನು ಖಂಡಿಸಿ ಅ.5 ರಂದು ತಿ.ನರಸೀಪುರ-ಮೈಸೂರು, ನಂಜನಗೂಡು-ಮೈಸೂರು, ಮಳವಳ್ಳಿ-ಮೈಸೂರು, ಬೆಂಗಳೂರು-ಮೈಸೂರು, ಎಚ್.ಡಿ ಕೋಟೆ-ಮೈಸೂರು, ಕೆ.ಆರ್.ನಗರ-ಮೈಸೂರು, ಮಂಡ್ಯ-ಮೈಸೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೆಆರ್‌ಎಸ್ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಹಾಗೂ ಕೆಆರ್‌ಎಸ್‌ಗೆ ಸಂಪರ್ಕ ಕಲ್ಪಿಸುವ ನಾಲೆಗಳ 1 ಕಿ.ಮೀ. ಅಂತರದಲ್ಲಿ ಶಾಶ್ವತವಾಗಿ ಗಣಿಗಾರಿಕೆ ನಿಷೇಧ ಮಾಡಿ ಕನ್ನಂಬಾಡಿ ಅಣೆಕಟ್ಟನ್ನು ಉಳಿಸಬೇಕು. ಪ್ರತಿ ಟನ್ ಕಬ್ಬಿಗೆ 4,500 ರೂ. ದರ ನಿಗದಿ ಮಾಡಬೇಕು ಹಾಗೂ ಹಳೆ ಬಾಕಿ ಪಾವತಿಸಬೇಕು. ಕರ ನಿರಾಕರಣೆ ಸಂದರ್ಭದಲ್ಲಿ ಉಳಿಸಿಕೊಂಡಿರುವ ಗೃಹ ವಿದ್ಯುತ್ ಬಾಕಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಭಾಗ್ಯಜ್ಯೋತಿ, ಕಟೀರ ಜ್ಯೋತಿ ಬಳಕೆದಾರರಿಂದ ವಿದ್ಯುತ್ ಬಾಕಿ ಬಲವಂತವಾಗಿ ವಸೂಲಿ ಮಾಡುತ್ತಿರುವುದು ಹಾಗೂ ಆಹಾರ ಪದಾರ್ಥಗಳ ಮೇಲೆ ವಿಧಿಸಿರುವ ಜಿಎಸ್‌ಟಿ ಕೈಬಿಡಬೇಕು. ಅತಿವೃಷ್ಟಿಯಿಂದ ಉಂಟಾಗಿರುವ ನಷ್ಟಗಳಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು. ಜತೆಗೆ, ಎಸ್‌ಎಪಿ ೋಷಿಸಬೇಕು. ರೈತರು ಹಾಗೂ ಕಾಫಿ ಬೆಳೆಗಾರರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆಯನ್ನು ಕೈಬಿಡಬೇಕು. ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಅ.11 ರಂದು ನಡೆಯುವ ಬೃಹತ್ ಚಳುವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಯಶ್ವಸಿಗೊಳಿಸುವಂತೆ ಮನವಿ ಮಾಡಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರೈತ ಮುಖಂಡರಾದ ಯಶ್ವಂತ್, ಮಹದೇವಪ್ಪ, ಎಂ.ವಿ.ಬಸವರಾಜು, ಆಲೂರು ಜಯಣ್ಣ, ಮೂಡ್ನಾಕೂಡು ಮಹೇಶ್ ಸುದ್ದಿಗೋಷ್ಠಿಯಲ್ಲಿದ್ದರು.