ಜಿಲ್ಲೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 7ರಂದು ಆಶಾ ಕಾರ್ಯಕರ್ತಯರ ಪ್ರತಿಭಟನೆ

ಮೈಸೂರು: ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಜ.7ರಂದು ಬೆಂಗಳೂರಿನ ಸ್ವತಂತ್ರ ಉದ್ಯಾನದಲ್ಲಿ ರಾಜ್ಯಮಟ್ಟದ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ.

ಆಶಾ ಕಾರ್ಯಕರ್ತೆಯರು ಹಗಲಿರುಳು ಜನರಿಗೆ ಆರೋಗ್ಯ ಸೌಲಭ್ಯ ಒದಗಿಸಿಕೊಡಲು ಆರೋಗ್ಯ ಇಲಾಖೆಯಲ್ಲಿ ಶ್ರಮಿಸುತ್ತಿದ್ದಾರೆ. ರಾಜ್ಯದಲ್ಲಿ ಇವರ ಸಂಖ್ಯೆ ಸುಮಾರು 42 ಸಾವಿರ ಇದೆ. ಆದರೆ, ಇವರು ಸ್ಕೀಂ ವರ್ಕರ್ ಎಂದು ಕೆಲಸ ಮಾಡುತ್ತಿದ್ದು, ಐದು ಸಾವಿರ ರೂ. ನಿಶ್ಚಿತ ಗೌರವಧನ ಮಾತ್ರ ನೀಡಲಾಗುತ್ತಿದೆ ಎಂದು ಸಂಘಟನೆಯ ರಾಜ್ಯ ಖಜಾಂಚಿ ಪಿ.ಎಸ್. ಸಂಧ್ಯಾ ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಅಸಹಾಯಕ ಬಡ ಮಹಿಳೆಯರು, ವಿಧವೆಯರು, ವಿಚ್ಛೇದಿತರನ್ನು ಆಶಾಗಳನ್ನಾಗಿ ಸರ್ಕಾರ ನೇಮಕ ಮಾಡಿಕೊಂಡಿದ್ದು, ಇವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ. ಪ್ರೋತ್ಸಾಹಧನ ನೀಡಲು ಆಶಾ ನಿಧಿ ಪೋರ್ಟಲ್‌ನಲ್ಲಿ ಆನ್‌ಲೈನ್ ದಾಖಲು ಮಾಡಬೇಕಾಗಿದ್ದು, ಇವರು ಮಾಡಿದ ಕೆಲಸಗಳು ದಾಖಲಾಗದೇ ಕಳೆದ 8 ವರ್ಷಗಳಿಂದ ಪ್ರೋತ್ಸಾಹಧನ ದೊರೆತಿಲ್ಲ.

ಜತೆಗೆ ತಾವೇ ದುಬಾರಿ ದರದ ಮೊಬೈಲ್ ಖರೀದಿಸಬೇಕು, ಇದಕ್ಕೆ ಡಾಟಾವನ್ನೂ ತಮ್ಮ ಹಣದಿಂದಲೇ ಭರಿಸಬೇಕಾದ ಪರಿಸ್ಥಿತಿಯೂ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಎಲ್ಲ ಸಮಸ್ಯೆ ಹೋಗಲಾಡಿಸಬೇಕು, ಇವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಇರುವ ಗೌರವಧನ, ಪ್ರೋತ್ಸಾಹಧನ ಸೇರಿಸಿ ಒಟ್ಟು ಮಾಸಿಕ 15 ಸಾವಿರ ರೂ. ಗೌರವಧನ ನಿಗದಿ ಪಡಿಸಬೇಕು. ಹೆಚ್ಚುವರಿ ಕೆಲಸ ಮತ್ತು ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಠ ಎರಡು ಸಾವಿರ ರೂ. ಗೌರವಧನ ಹೆಚ್ಚಳ ಮಾಡಬೇಕು,

ಮೊಬೈಲ್ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ಮಾಡಿಸಿಕೊಳ್ಳುವುದನ್ನು ಕೈಬಿಡಬೇಕು, ಇವರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ, ಗ್ರಾಚ್ಯುಟಿ, ಪಿಎಫ್, ಇಎಸ್‌ಐ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿ ಅನಿರ್ದಿಷ್ಟಾವಧಿ ಹೋರಾಟ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಕಳೆದ ವರ್ಷದ ಫೆಬ್ರುವರಿಯಲ್ಲಿ ಸ್ವಾತಂತ್ರೃ ಉದ್ಯಾನದಲ್ಲಿ ಹೋರಾಟ ನಡೆಸಿದಾಗ ಸ್ವತಃ ಸಿಎಂ ಆಗಮಿಸಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹೋರಾಟ ಅಂತ್ಯಗೊಳಿಸಲಾಗಿತ್ತು. ಆದರೆ ಭರವಸೆ ಈಡೇರಿಸಿಲ್ಲ. ಹೀಗಾಗಿ ಸಮಸ್ಯೆ ಬಗೆಹರಿಯುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು. ಮುಖಂಡರಾದ ಭಾಗ್ಯ, ಮಣಿಲಾ, ಸುನೀತಾ, ಕೋಮಲಾ, ಸುಧಾ ಇದ್ದರು.