ಹಾಸನ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅತಿಥಿ ಉಪನ್ಯಾಸಕರು ಸೋಮವಾರ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕ ಕುಮಾರ್ ಮಾತನಾಡಿ, ಅತಿಥಿ ಉಪನ್ಯಾಸಕರನ್ನು ಸರ್ಕಾರ ಕಡೆಗಣಿಸಿದೆ. ಸುಮಾರು 4 ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಕನಿಷ್ಠ ವೇತನವೂ ಇಲ್ಲದೆ ಸೇವಾ ಭದ್ರತೆಯೂ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಹೆಚ್ಚು ಅವಧಿ ದುಡಿಸಿಕೊಂಡು ಕಡಿಮೆ ವೇತನ ನೀಡಿ ಅತಿಥಿ ಉಪನ್ಯಾಸಕರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸರ್ಕಾರ ಕೂಡಲೇ ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಸ್ಪಂದಿಸಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೌರವಧನವನ್ನು ಇದುವರೆಗೂ ನೀಡಿಲ್ಲ. ಎಲ್ಲಾ ಅತಿಥಿ ಉಪನ್ಯಾಸಕರಿಗೆ ನೀಡುವ ಗೌರವ ಧನವನ್ನು ಆಯಾ ಶೈಕ್ಷಣಿಕ ವರ್ಷದಲ್ಲೇ ನೀಡಬೇಕು. ಒಬ್ಬ ಅತಿಥಿ ಉಪನ್ಯಾಸಕರನ್ನು ವಾರದಲ್ಲಿ 10 ಗಂಟೆ ಮಾತ್ರ ದುಡಿಸಿಕೊಳಬೇಕು. ಹೆಚ್ಚಿನ ಅವಧಿ ಹಾಗೂ ನಿಯೋಜನೆ (ಡೆಪ್ಯೂಟೇಷನ್) ಮೇಲೆ ಕೆಲಸ ಮಾಡಿಸುವ ಪದ್ಧತಿಯನ್ನು ಹಿಂಪಡೆಯಬೇಕು. ಇಲ್ಲವಾದರೆ ದುಪ್ಪಟ್ಟು ವೇತನ ನೀಡಬೇಕು ಎಂದರು.
ಲೆಕ್ಕಶಾಸ್ತ್ರ ಮತ್ತು ಆಹಾರ ಅಧ್ಯಯನ ವಿಷಯಗಳಿಗೆ ಪ್ರತ್ಯೇಕವಾಗಿ 2 ಜನ ಅತಿಥಿ ಉಪನ್ಯಾಸಕರಿಗೆ ಅವಕಾಶ ನೀಡಬೇಕು. ಮೌಲ್ಯಮಾಪನ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಿಗೆ ಖಾಸಗಿ ಕಾಲೇಜಿನ ಉಪನ್ಯಾಸಕರಿಗಿಂತ ಮೊದಲ ಆದ್ಯತೆ ನೀಡಬೇಕು. ಸೇವಾ ಅನುಭವದ ಆಧಾರದ ಮೇಲೆ ಸರ್ಕಾರಿ ಪದವಿಪೂರ್ವ ಕಾಲೇಜು ಅತಿಥಿ ಉಪನ್ಯಾಸಕರ ನೇಮಕ ಮಾಡಬೇಕು. ಸೇವಾ ಪ್ರಮಾಣಪತ್ರ ನೀಡಿ, 25 ಸಾವಿರ ರೂ.ವರೆಗೆ ವೇತನ ಹೆಚ್ಚಳ ಮಾಡಬೇಕು. ದಸರಾ ರಜೆ ವೇಳೆ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ, ರಾಜೇಶ್, ಚಂದ್ರು, ರವೀಂದ್ರ ,ಪ್ರಶಾಂತ್, ಮಹೇಶ್, ಸೌಜನ್ಯಾ, ನಂದೀಶ್, ಯೋಗೇಶ್, ಮೀನಾಕ್ಷಿ, ಶೃತಿ, ಅವಿನಾಶ್, ಸಂತೋಷ್ ಇತರರು ಇದ್ದರು