ಬೆಳಗಾವಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಬಿಜೆಪಿ ಮುಖಂಡೆ ಡಾ.ಸೋನಾಲಿ ಸರ್ನೋಬತ್ ಅವರಿ ಡಿಸಿ ನಿತೇಶ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. 
ಜಿಲ್ಲೆ

ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹ

ಬೆಳಗಾವಿ: ಖಾನಾಪುರ ತಾಲೂಕಿನ ಗ್ರಾಮಗಳಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಜಿಲ್ಲಾಧಿಕಾರಿ, ಜಿಪಂ ಸಿಇಒಗೆ ಗುರುವಾರ ಬಿಜೆಪಿ ಗ್ರಾಮೀಣ ಜಿಲ್ಲಾ ಮಹಿಳಾ ಘಟಕದ ನಾಯಕಿ ಡಾ.ಸೋನಾಲಿ ಸರ್ನೋಬತ್ ಪ್ರತ್ಯೇಕ ಮನವಿ ಸಲ್ಲಿಸಿದರು.

ಖಾನಾಪುರ ತಾಲೂಕಿನ ದೂರದ ಹಲವು ಗ್ರಾಮಗಳಲ್ಲಿ ಪಡಿತರ ವಿತರಣಾ ಕೇಂದ್ರಗಳಿಲ್ಲ. ಹಾಗಾಗಿ 15ರಿಂದ 20 ಕಿಮೀ ದೂರದಿಂದ ಪಡಿತರ ತರಬೇಕಾಗಿದೆ. ಪಡಿತರ ಆಹಾರ ಧಾನ್ಯಗಳ ಬೆಲೆ ಹಾಗೂ ಸಾಗಣೆ ವೆಚ್ಚ ಒಂದೇ ಆಗಿರುವುದರಿಂದ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಪಡಿತರ ವಿತರಣಾ ಕೇಂದ್ರವನ್ನು ಹೆಚ್ಚಿಸಬೇಕು.ಗ್ರಾಮದಲ್ಲಿ ಪಡಿತರ ಅಂಗಡಿ ಇಲ್ಲದ ಕಾರಣ ನಾಗರಿಕರು ಪಡಿತರ ಧಾನ್ಯಗಳನ್ನು ತರಲು ದಟ್ಟ ಅರಣ್ಯದಿಂದ ಪರದಾಡುತ್ತಾರೆ. ಇದಕ್ಕಾಗಿ ಮೋಹಿಶೇತನಲ್ಲಿ ಮೋಹಿಶೇಟ್, ಪಾಟಯೆ, ಪಾಲಿ, ದೇಗಾಂವ, ಪಿಂಪಳೆ, ಕರಿಕಟ್ಟಿ, ಜುಂಜವಾಡ್ ಕೆ ಜಿ ಮತ್ತು ಅಮಗಾಂವದಲ್ಲಿ ಹೊಸ ಪಡಿತರ ವಿತರಣಾ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಪಾರಿಶ್ವಾಡ ಸರ್ಕಾರಿ ಪಶು ಸಂಗೋಪನಾ ಕೇಂದ್ರದಿಂದ ವೈದ್ಯರ ವರ್ಗಾವಣೆಯಿಂದಾಗಿ ಕಳೆದ ಹಲವು ತಿಂಗಳಿಂದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಕೂಡಲೇ ಖಾಲಿ ಇರುವ ಪಶು ವೈದ್ಯಾಧಿಕಾರಿಗಳ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ನಾಗರಗಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಂಬ್ರಪಾಣಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರ್ದೇಶಕರಿಗೆ ಡಾ. ಸರ್ನೋಬತ್ ಭೇಟಿ ನೀಡಿದರು. ಉಂಬರಾಪಾಣಿ ಗ್ರಾಮದಲ್ಲಿ 25 ಕುಟುಂಬಗಳಿದ್ದು, 90 ಜನಸಂಖ್ಯೆ ಇದೆ. ಆದರೆ ಅಂಗನವಾಡಿ ಕೇಂದ್ರಗಳ ಕೊರತೆಯಿಂದ ಐದು ವರ್ಷದೊಳಗಿನ ಮಕ್ಕಳು ಸರ್ಕಾರ ನಡೆಸುವ ಆರೈಕೆ ಯೋಜನೆ ಹಾಗೂ ಪೌಷ್ಟಿಕ ಆಹಾರದಿಂದ ವಂಚಿತರಾಗಿದ್ದಾರೆ. ತುರ್ತಾಗಿ ಇಲ್ಲಿನ ಅಂಗನವಾಡಿ ಕೇಂದ್ರ ಮಂಜೂರು ಮಾಡುವಂತೆ ಮನವಿ ಮೂಲಕ ಆಗ್ರಹಿಸಿದರು.