ಜಿಲ್ಲೆ

ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರಿಂದ ಪ್ರತಿಭಟನೆ

ಹಾಸನ :ಗ್ರಾಮೀಣ ಅಂಚೆ ನೌಕರರನ್ನು ಕಾಯಂ ಮಾಡುವಂತೆ ಹಾಗೂ ಕಮಲೇಶನ್ ಸಮಿತಿ ಶಿಪಾರಸ್ಸು ಮಾಡಿರುವ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ (ಎಐಜಿಡಿಎಸ್‌ಯು) ವತಿಯಿಂದ ಹಾಸನ ಮುಖ್ಯ ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಬುಧವಾರ ಗ್ರಾಮೀಣ ಅಂಚೆ ನೌಕರರು ಕೆಲಸಕ್ಕೆ ಹಾಜರಾಗದೆ ಮುಖ್ಯ ಅಂಚೆ ಕಚೇರಿ ಮುಂದೆ ಒಂದು ದಿನದ ಮಟ್ಟಿಗೆ ಪ್ರತಿಭಟನಾ ಮುಷ್ಕರ ನಡೆಸಿದರು. ಗ್ರಾಮೀಣ ಅಂಚೆ ನೌಕರರ ಪ್ರಮುಖ ಬೇಡಿಕೆಗಳಾದ 8 ಗಂಟೆಗಳ ಕೆಲಸ ನೀಡುವುದು ಮತ್ತು ಪಿಂಚಣಿ ಸೇರಿದಂತೆ ಎಲ್ಲ ಸವಲತ್ತಗಳನ್ನು ಒದಗಿಸಬೇಕು. ಸೇವಾ ಹಿರಿತನದ ಆಧಾರದ ಮೇಲೆ 12-24-36 ಸೇವೆ ಸಲ್ಲಿಸಿದ ಜಿಡಿಎಸ್ ನೌಕರರಿಗೆ ವಿಶೇಷ ಇನ್‌ಕ್ರೀಮೆಂಟ್ ನೀಡುವುದು, ಗುಂಪು ವಿಮೆ ಕವರೇಜ 5 ಲಕ್ಷ ರೂ.ವರೆಗೆ ಹೆಚ್ಚಿಸಬೇಕು. ಅವೈಜ್ಞಾನಿಕ ಗುರಿ ಸಾಧಿಸದಿರುವ ಜಿಡಿಎಸ್ ನೌಕರರಿಗೆ ನೀಡುತ್ತಿರುವ ಕಿರುಕುಳವನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಜಿಡಿಎಸ್ ಗ್ರಾಚ್ಯುಟಿ ಹಣವನ್ನು 5 ಲಕ್ಷ ರೂ.ವರೆಗೆ ಹೆಚ್ಚಿಸಿ ಹಾಗೂ 180 ದಿನಗಳ ರಜೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಿ, ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ತಮ್ಮ ಬೇಡಿಕೆಗಳನ್ನು ಮುಂದಿಟ್ಟರು.

ಪ್ರತಿಭಟನೆಯಲ್ಲಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಹಾಸನ ವಿಭಾಗದ ಅಧ್ಯಕ್ಷ ಜಿ.ಬಿ. ಕಾಳಿಗೇಗೌಡ, ಕಾರ್ಯದರ್ಶಿ, ಕೆ.ಜಿ. ಶಿವಾಜಿ, ಕಾರ್ಯಾಧ್ಯಕ್ಷ ಎಚ್.ಇ. ಜಯಣ್ಣ, ಸಂಘಟನಾ ಕಾರ್ಯದರ್ಶಿ ದಿನೇಶ್, ಪದಾಧಿಕಾರಿಗಳಾದ ಮಲ್ಲೇಶ್, ಸತೀಶ್, ವಾಸು, ವಿನೋದ್ ಕುಮಾರ್, ಮಧು, ಇತರರು ಪಾಲ್ಗೊಂಡಿದ್ದರು.