ಜಿಲ್ಲೆ

ವಿವಿಧ ಪ್ರಕರಣಗಳಲ್ಲಿ ನಾಲ್ವರ ಬಂಧನ

ಬೀದರ್: ಜಿಲ್ಲೆಯ ವಿವಿಧ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದು 7 ಲಕ್ಷ ರೂ. ಮೌಲ್ಯದ ಒಂದು ಕಾರು, 10 ಬೈಕ್ ಹಾಗೂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನ್ಯೂಟೌನ್ ಠಾಣೆ ವ್ಯಾಪ್ತಿಯ ಬಸ್ ನಿಲ್ದಾಣದಲ್ಲಿ ಮೇ 29ರಂದು ವ್ಯಕ್ತಿಯೊಬ್ಬ ಸ್ವಿಫ್ಟ್ ಕಾರು ಕಳವು ಮಾಡಿದ್ದ. ತನ್ನ ಇನ್ನಿಬ್ಬರು ಸಹಚರರೊಂದಿಗೆ ಚಿಟಗುಪ್ಪ ತಾಲೂಕಿನ ಮೀನಕೇರಾ ಕ್ರಾಸ್ ನಲ್ಲಿ 12 ಸಾವಿರ ರೂ. ಸುಲಿಗೆ ಮಾಡಿದ್ದಾನೆ. ನ್ಯೂಟೌನ್ ಮತ್ತು ತೆಲಂಗಾಣದ ಜಹೀರಾಬಾದ್ ನಲ್ಲಿ ತಲಾ ಎರಡು ಬೈಕ್ ಕದ್ದಿದ್ದಾನೆ. ಚಿಟಗುಪ್ಪ ತಾಲೂಕಿನ ಮನ್ನಾಏಖೇಳ್ಳಿಯಲ್ಲಿ ನಾಲ್ಕು ಮೊಬೈಲ್, 3 ಸಾವಿರ ನಗದು ಸೇರಿ 3.36 ಲಕ್ಷದ ವಸ್ತುಗಳನ್ನು ಕದ್ದಿದ್ದ. ಬಂಧಿತನಿಂದ ಅವುಗಳನ್ನೆಲ್ಲ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಚನ್ನಬಸವಣ್ಣ ಲಂಗೋಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಗ್ರಾಮೀಣ ಠಾಣೆ ವ್ಯಾಪ್ತಿಯ ಕುಂಚಗೆ ಲೇಔಟ್ ನಲ್ಲಿ ಜ.9ರಂದು ನಡೆದಿದ್ದ ದರೋಡೆ ಸಂಬಂಧ 1.09 ಲಕ್ಷದ ಚಿನ್ನಾಭರಣ ಜಪ್ತಿ ಮಾಡಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಮಾರ್ಕೆಟ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಆರು ಬೈಕ್ ಕಳವು ಪ್ರಕರಣ ಭೇದಿಸಲಾಗಿದೆ. 14 ಸಾವಿರ ಮೌಲ್ಯದ 18 ತೊಲ ಬೆಳ್ಳಿ ಆಭರಣ ಹಾಗೂ ಎರಡು ಬಟ್ಟೆ ಹೊಲಿಯುವ ಎರಡು ಯಂತ್ರ ಸೇರಿ 44 ಸಾವಿರ ಮೌಲ್ಯದ ವಸ್ತು ಜಪ್ತಿ ಮಾಡಿ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಎಲ್ಲ ಅಪರಾಧ ಪ್ರಕರಣಗಳನ್ನು ಭೇದಿಸಿದ ವಿಶೇಷ ತಂಡದವರಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು. ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣವರ್ ಇತರರಿದ್ದರು.