ಜಿಲ್ಲೆ

ವಿವಿಧ ನಾಲ್ಕು ಕೃತಿಗಳ ಬಿಡುಗಡೆ

ಆರ್.ಕೃಷ್ಣ

ಮೈಸೂರು: ಲೇಖಕ ಎಸ್.ರಾಮಪ್ರಸಾದ್ ಅವರು 80 ವರ್ಷಕ್ಕೆ ಕಾಲಿಟ್ಟ ಅಂಗವಾಗಿ ನಗರದಲ್ಲಿ ಅವರ ನಾಲ್ಕು ಕೃತಿಗಳು ಬಿಡುಗಡೆಗೊಂಡವು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ, ಮೈಸೂರು ಕನ್ನಡ ಸಾಹಿತ್ಯ ಕಲಾಕೂಟ, ಮೈಸೂರು ಹೊಯ್ಸಳ ಕನ್ನಡ ಸಂಘದಿಂದ ಸರಸ್ವತಿಪುರಂನ ರೋಟರಿ ಪಶ್ವಿಮ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಾಮಪ್ರಭೆ, ಮನೆಯೊಂದು ಬಾಗಿಲೈದು, ಕೇಳು ಜಾಣತಮ್ಮನ ಮುಕ್ತಕಗಳು ಹಾಗೂ ಆಳಾರ್ಸ್‌ ಆ್ಯಂಡ್ ಶ್ರೀರಾಮಾನುಜಾಚಾರ್ಯ ಕೃತಿಗಳು ಅನಾವರಣಗೊಂಡವು.
ಕೆಎಸ್‌ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್. ರವಿ ಅವರು ಮಾತನಾಡಿ, ಜೀವನ ಪ್ರೀತಿ, ಜತೆಗೆ ಅದೇ ಪ್ರೀತಿಯಿಂದ ಬೇರೊಬ್ಬರನ್ನು ಕಾಣುವ ರೀತಿ, ಮಾದರಿ ಅನುಕರಣೀಯ. ಇಂತಹ ಗುಣಗಳಿಂದ ವ್ಯಕ್ತಿತ್ವ ಬೆಳೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಅದಕ್ಕೆ ರಾಮಪ್ರಸಾದ್ ಉದಾಹಣೆ ಎಂದರು.
ವೃದ್ಧಾಪ್ಯದಲ್ಲಿನ ಸಂಕಟ ಅದನ್ನು ಅನುಭವಿಸುವವರಿಗೆ ಮಾತ್ರ ಗೊತ್ತು. ಇತ್ತೀಚೆಗೆ ಅನೇಕ ಮನೆಗಳು ವೃದ್ಧಾಶ್ರಮವಾಗುತ್ತಿವೆ. ಮಕ್ಕಳು, ಮೊಮ್ಮಕ್ಕಳು ಓದಲು, ಉದ್ಯೋಗಕ್ಕಾಗಿ ಬೇರೆ, ಬೇರೆ ಊರುಗಳಿಗೆ ಹೋಗುವುದರಿಂದ ಮನೆಯಲ್ಲಿ ಬರಿ ಹಿರಿಯರು ಮಾತ್ರವೇ ಉಳಿಯುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಜೀವಂತಿಕೆ ಎಂಬುದು ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಮಪ್ರಸಾದ್ ಅವರು ಓದು ಮತ್ತು ಬರವಣಿಗೆಯನ್ನು ಶ್ರದ್ಧಾ ಪೂರ್ವಕವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಮತ್ತೊಂದೆರಡು ಪುಸ್ತಕ ಬರೆಯುತ್ತಿದ್ದಾರೆ. ಇವರ ಜೀವನ ನೋಡಿ ಆತ್ಮಾವಲೋಕನ ಮಾಡಿಕೊಂಡಾಗ ನಮ್ಮಲ್ಲಿನ ನ್ಯೂನ್ಯತೆ, ಲೋಪ ಕಾಣಬಹುದು. ಆಗ ಮತ್ತೊಮ್ಮೆ ನಾವು ಶುದ್ಧೀಕರಣವಾಗಲು ಸಾಧ್ಯವಾಗುತ್ತದೆ ಎಂದರು.
ಬಿಡುಗಡೆಗೊಂಡ ಕೃತಿಗಳನ್ನು ಕುರಿತು ಲೇಖಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ. ಜ್ಯೋತಿಶಂಕರ್ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಸುಶ್ಮಿತಾ ಪ್ರಕಾಶನದ ರಂಗನಾಥ್ ಮೈಸೂರು, ಮುದ್ದುಕೃಷ್ಣ ಪ್ರಕಾಶನದ ಎಂ.ಮುತ್ತುಸ್ವಾಮಿ, ಸುಧರ್ಮಾ ಪ್ರಕಾಶನದ ಕೆ.ಎಸ್.ಜಯಲಕ್ಷ್ಮಿ ಇತರರು ಇದ್ದರು.