ಚಿತ್ರದುರ್ಗ: ನಗರದ ನಾನಾ ದೇವಾಲಯಗಳಲ್ಲಿ ಶನಿವಾರ ವೈಕುಂಠ ಏಕಾದಶಿ ಅಂಗವಾಗಿ ಶನಿವಾರ ವೈಭವದ ಅಲಂಕಾರಗಳೊಂದಿಗೆ ವಿಶೇಷ ಪೂಜೆಗಳು ಜರುಗಿದವು. ಭಕ್ತರು ಹಲವು ದೇವಾಲಯಗಳಲ್ಲಿ ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದರು. ವೆಂಕಟೇಶ್ವರ ಸ್ವಾಮಿ ದೇವಸ್ಥಾನಗಳಲ್ಲಿ ಮುಂಜಾನೆ ವಿವಿಧ ಅಭಿಷೇಕಗಳನ್ನು ನೆರವೇರಿಸಿದ ಚಿನ್ನಾಭರಣ ಹಾಗೂ ಬಗೆ ಬಗೆಯ ಹೂವಗಳೊಂದಿಗೆ ಸ್ವಾಮಿಯನ್ನು ಅಲಂಕರಿಸಿ ಪೂಜಿಸಲಾಯಿತು.
ನಗರದ ಆನೆಬಾಗಿಲು ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಾಲಯ, ನಗರದ ತುರುವನೂರು ರಸ್ತೆ ಶ್ರೀ ವೆಂಕಟರಮಣ ದೇವಸ್ಥಾನ, ಬಸವೇಶ್ವರ ಸರ್ಕಲ್ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯ, ಕೋಟೆ ವೇಣುಗೋಪಾಲಸ್ವಾಮಿ ದೇವಸ್ಥಾನ, ಜೆಸಿಆರ್ ಸರ್ಕಲ್ ಇಸ್ಕಾನ್ ಮಂದಿರ ಸೇರಿದಂತೆ ನಾನಾ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು. ಕೆಲವು ದೇವಾಲಯಗಳಲ್ಲಿ ನಿರ್ಮಿಸಿದ್ದ ವೈಕುಂಠ ಮಾದರಿ ದ್ವಾರದ ಮೂಲಕ ಭಕ್ತರು ಪಡೆದರು.
ಭೂ ವರಾಹ ಸ್ವಾಮಿ ಅವತಾರ ದರ್ಶನ
ನಗರದ ಶ್ರೀ ಕನ್ಯಕಾ ಪರಮೇಶ್ವರಿ ಅಮ್ಮನವರ ದೇವಾಲಯದಲ್ಲಿ ವೈಕುಂಠ ದ್ವಾರದ ಮೂಲಕ ಭೂ ವರಾಹ ಸ್ವಾಮಿಯ ಅವತಾರ ದರ್ಶನ ಏರ್ಪಡಿಸಲಾಗಿತ್ತು. ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ವೈಕುಂಠದ್ವಾರವನ್ನು ಉದ್ಘಾಟಿಸಿದರು. ಆರ್ಯವೈಶ್ಯ ಸಂಘದ ಅಧ್ಯಕ್ಷ ಎಲ್. ಇ.ಶ್ರೀನಿವಾಸಬಾಬು, ಕುಡಾಮಾಜಿ ಅಧ್ಯಕ್ಷ ಟಿ.ಬದರಿನಾಥ್,ಕಾಶಿವಿಶ್ವನಾಥ ಶೆಟ್ರು,ಕೋಟೇಶ್‌ಶೆಟ್ಟು ಮತ್ತಿತರ ಪ್ರಮುಖರು ಇದ್ದರು.