ಜಿಲ್ಲೆ

ವಿವಿಧ ದೇಗುಲಗಳಲ್ಲಿ ದೀಪೋತ್ಸವ

ಮಳವಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ದೇವಸ್ಥಾನಗಳಲ್ಲಿ ಸೋಮವಾರ ರಾತ್ರಿ ಮೂರನೇ ಕಾರ್ತಿಕ ಸೋಮವಾರದ ಪೂಜಾ ಕೈಂಕರ್ಯ ಹಾಗೂ ದೀಪೋತ್ಸವ ನೇರವೇರಿದವು.

ಪಟ್ಟಣದ ಗಂಗಾಧರೇಶ್ವರ, ಮಹದೇಶ್ವರ, ಪಟ್ಟಲದಮ್ಮ, ಕೋಟೆ ಕಾಳಮ್ಮ, ಸಾರಂಗಪಾಣಿ, ಮೂಲೆ ಗಣೇಶ ದೇವಸ್ಥಾನಗಳಲ್ಲಿ ಪೂಜೆಗಳು ಜರುಗಿದವು. ತಾಲೂಕಿನ ಬಿ.ಜಿ.ಪುರ ಗ್ರಾಮದಲ್ಲಿರುವ ಧರೆಗೆ ದೊಡ್ಡವರು ಮಂಟೇಸ್ವಾಮಿ ಮಠದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಮಂಟೇಸ್ವಾಮಿ ಗದ್ದುಗೆ ದರ್ಶನ ಪಡೆದು ದೀಪ ಬೆಳಗಿಸಿ ಪೂಜೆ ಸಲ್ಲಿಸಿದರು. ರಾಗಿಬೊಮ್ಮನಹಳ್ಳಿ ಮಹದೇಶ್ವರ ದೇವಸ್ಥಾನದಲ್ಲಿ ಮಹದೇಶ್ವರ ಸ್ವಾಮಿಗೆ ಅಭಿಷೇಕ, ಮಜ್ಜನ ಸೇವೆ ಮಾಡಿ ಅಲಂಕಾರ ಮಾಡಲಾಗಿತ್ತು. ಗ್ರಾಮಸ್ಥರು ದೇವಸ್ಥಾನದ ಆವರಣದಲ್ಲಿ ಸಾವಿರಾರು ದೀಪಗಳನ್ನು ಹಚ್ಚಿದರು.

ಪೂರಿಗಾಲಿ ರಾಮಮಂದಿರದಲ್ಲಿ ದೀಪೋತ್ಸವ ಪೂಜೆ ಸಲ್ಲಿಸಲಾಯಿತು. ಗ್ರಾಮದ ಪಾತಾಳೇಶ್ವರ, ನೆಲ್ಲಿಗೆರೆ ಮಹದೇಶ್ವರಸ್ವಾಮಿ ದೇವಸ್ಥಾನ, ಹಲಗೂರು ಬಳಿಯ ಹೆಬ್ಬೆಟ್ಟದ ಬಸವೇಶ್ವರ, ಗೌಡಗೆರೆ ಬಸವೇಶ್ವರ, ಬೆಳಕವಾಡಿ ಕಾಶಿವಿಶ್ವನಾಥ ದೇವಾಲಯ, ದುಗ್ಗನಹಳ್ಳಿ ಹಾಗೂ ಸರಗೂರು ಸಮೀಪದ ಮಹದೇಶ್ವರ ದೇವಸ್ಥಾನ ಮತ್ತು ಯತ್ತಂಬಾಡಿ, ಅಂತರವಳ್ಳಿ ಬೆಟ್ಟದ ದೇವಸ್ಥಾನಗಳಲ್ಲೂ ಕಾರ್ತಿಕ ಮಾಸದ ವಿಶೇಷ ಪೂಜಾ ಕಾರ್ಯಗಳು ನಡೆದವು.