ಜಿಲ್ಲೆ

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸನ್ಮಾನ ಮಾಡಬೇಕು: ಬಿ.ಆರ್.ಪೂರ್ಣಿಮಾ

ಹಾಸನ: ಸರ್ಕಾರದ ಸೂಚನೆಯಂತೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾರ್ಚ್ 8 ಬೆಳಿಗ್ಗೆ 11 ಗಂಟೆಗೆ ಕಲಾಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು ಮಹಿಳಾ ಸಬಲೀಕರಣ ಹಾಗೂ ಸಮಾನ ಅವಕಾಶಗಳ ಸೃಷ್ಟಿ ಸರ್ಕಾರದ ಆಶಯವಾಗಿದ್ದು ಅದಕ್ಕೆ ಪೂರಕವಾಗಿ ಕಾರ್ಯಕ್ರಮ ರೂಪಿಸುವಂತೆ ಹಾಗೂ , ಮಹಿಳಾ ಸಬಲೀಕರಣ ಯೋಜನೆಗಳು ಬ್ಯಾಂಕಿಂಗ್ ಸೌಲಭ್ಯ, ಕಾನೂನು ನೆರವುಗಳ ಬಗ್ಗೆ ವಿಶೇಷ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸನ್ಮಾನ ಮಾಡಬೇಕು. ಕಡಿಮೆ ಸಿಸೇರಿಯನ್ ಮಾಡುವ ಸರ್ಕಾರಿ ವೈದ್ಯರನ್ನು ಗುರುತಿಸಿ ಸನ್ಮಾನ ಮಾಡಬೇಕು. ಎಲ್ಲಾ ಕ್ಷೇತ್ರದಲ್ಲಿ ಉತ್ತಮ ಸೇವೆ ಮಾಡುವವರನ್ನು ಗುರುತಿಸಿ ಗೌರವಿಸಬೇಕು ಎಂದರು.

ಮಾ.8 ರಂದು ಜಿಲ್ಲಾ ಪಂಚಾಯಿತಿ ಮುಂಭಾಗದಿಂದ ಮಹಿಳಾ ಕಲಾತಂಡಗಳನ್ನು ಒಳಗೊಂಡಂತೆ ವಿಶೇಷ ಮೆರವಣಿಗೆ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಮಾರಾಟ ಮಳಿಗೆ ಹಾಕಬೇಕು:
ಮಹಿಳಾ ದಿನಾಚರಣೆ ಅಂಗವಾಗಿ ಮಾ. 8 ರಿಂದ 5 ದಿನಗಳ ಕಾಲ ಕಲಾಭವನದ ಮುಂಭಾಗ 30 ಮಾರಾಟ ಮಳಿಗೆ ಹಾಕಬೇಕು. ಕೇಂದ್ರ ಈ ಬಾರಿ ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಆಚರಿಸುತ್ತಿರುವುದರಿಂದ ಮಳಿಗೆಗಳನ್ನು ತೆರೆದು ಸಿರಿಧಾನ್ಯ ಉತ್ಪನ್ನಗಳ ಪ್ರದರ್ಶನ ಮಾರಾಟಕ್ಕೆ ಆದ್ಯತೆ ನೀಡುವಂತೆ ಸೂಚಿಸಿದರು.

ಕ್ರಿಕೆಟ್ ಪಂದ್ಯಾವಳಿ:
ಸರ್ಕಾರದ ಸುತ್ತೋಲೆಯಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಮಹಿಳಾ ತಂಡಗಳ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್ ಪೂರ್ಣಿಮಾ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪರಪ್ಪ ಸ್ವಾಮಿ ಕಾರ್ಯಕ್ರಮದ ಸ್ವರೂಪ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಚಂದ್ರಶೇಖರ್, ಡಾ ಪುನಿತ್, ಮುಖ್ಯ ಲೆಕ್ಕಾಧಿಕಾರಿ ಜಿಲ್ಲಾ ಪಂಚಾಯತ್ ತಫಜುಲ್ ಹುಸ್ಸೇನ್ ಇತರರು ಇದ್ದರು.