ಜಿಲ್ಲೆ

ವಿವಿಧ ಕ್ಷೇತ್ರಗಳ 75 ಸಾಧಕರಿಗೆ ಸನ್ಮಾನ ಇಂದು

ಶ್ರೀರಂಗಪಟ್ಟಣ: ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನ ಅಮೃತ ಮಹೋತ್ಸವ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು ಮತ್ತು ಶ್ರಮಿಕರಿಗೆ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಸೆ.17ರಂದು ಸನ್ಮಾನಿಸಲಾಗುತ್ತಿದೆ ಎಂದು ಬಿಜೆಪಿ ಯುವ ಮುಖಂಡ ಎಸ್.ಸಚ್ಚಿದಾನಂದ ತಿಳಿಸಿದರು.

ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜನಪರ ಯೋಜನೆಗಳ ಜಾರಿ ಹಾಗೂ ಬದ್ಧತೆಯ ಆಡಳಿತದ ಮೂಲಕ ದೇಶ ಮಾತ್ರವಲ್ಲದೆ ವಿಶ್ವನಾಯಕರಾಗಿ ಗುರುತಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಕ್ಷೇತ್ರದ ಜನರಿಗೆ ಜನಪರ ಕೆಲಸಗಳಿಂದ ಶುಭಕೋರುವ ಯೋಜನೆಗೆ ತೀರ್ಮಾನಿಸಲಾಗಿದೆ. ದೇಶಕ್ಕೆ ನಿರಂತರ ಸೇವೆ ಸಲ್ಲಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ 75ನೇ ವರ್ಷದ ಈ ಅಮೋಘ ಸಂದರ್ಭದಲ್ಲಿ ಶ್ರೀರಂಗಪಟ್ಟಣ ಕ್ಷೇತ್ರ ವ್ಯಾಪ್ತಿಯಲ್ಲಿ 75 ವಿವಿಧ ಸ್ಥಳಗಳಲ್ಲಿ 75 ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 75 ಜನ ನಿವೃತ್ತ ಯೋಧರು, ಶಿಕ್ಷಕರು, ಪ್ರತಿಭಾವಂತ ವಿದ್ಯಾರ್ಥಿಗಳು, ವೈದ್ಯರು, ವಕೀಲರು, ಪ್ರಗತಿಪರ ರೈತರನ್ನು ಸನ್ಮಾನಿಸಲಾಗುತ್ತಿದೆ ಎಂದರು.

ಇದರ ಪ್ರಾರಂಭಿಕ ಹಂತವಾಗಿ ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ಸೆ.17ರಂದು ಬೆಳಗ್ಗೆ 10.30ಕ್ಕೆ ಟೌನ್ ವ್ಯಾಪ್ತಿಯ 400ಕ್ಕೂ ಹೆಚ್ಚು ಆಟೋ ಚಾಲಕರು ಹಾಗೂ ಪುರಸಭೆ ವ್ಯಾಪ್ತಿಯ ಪೌರ ಕಾರ್ಮಿಕರು ಮತ್ತು ನೀರು ಗಂಟಿಗಳಿಗೆ ಸಮವಸ್ತ್ರ ವಿತರಣೆ ಸೇರಿದಂತೆ ಗೌರವ ಸಲ್ಲಿಸಲಾಗುವುದು. 75 ಸ್ಥಳಗಳಲ್ಲೂ ಆರೋಗ್ಯ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಸಾಮಾಜಿಕ ಕಾರ್ಯವನ್ನು ಕ್ಷೇತ್ರದಲ್ಲಿ ದಿನಪೂರ್ತಿ ನಡೆಸಲಾಗುತ್ತಿದ್ದು, ಪ್ರಧಾನಿ ಅವರ ಅಭಿಮಾನಿಗಳು ಹಾಗೂ ರಾಷ್ಟ್ರಪ್ರೇಮಿಗಳು ಭಾಗಿಯಾಗಬೇಕು ಎಂದು ಮನವಿ ಮಾಡಿದರು.