ಪಿರಿಯಾಪಟ್ಟಣ ತಾಲೂಕಿನ ಪಾರೆಕೊಪ್ಪಲು ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಕೆ.ಮಹದೇವ್ ಭೂಮಿಪೂಜೆ ನೆರವೇರಿಸಿದರು. ಪುರಸಭೆ ಅಧ್ಯಕ್ಷ ಕೆ.ಮಹೇಶ್, ಮಾಲಂಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ ಮತ್ತಿತರರು ಇದ್ದಾರೆ. 
ಜಿಲ್ಲೆ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ

ಪಿರಿಯಾಪಟ್ಟಣ: ತಾಲೂಕಿನ ವಿವಿಧ ಗ್ರಾಮಗಳಲ್ಲಿ 1.30 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಮಹದೇವ್ ಸೋಮವಾರ ಭೂಮಿಪೂಜೆ ನೆರವೇರಿಸಿದರು.

ಪಾರೆಕೊಪ್ಪಲು ಗ್ರಾಮದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಜನಸಾಮಾನ್ಯರು ಗ್ರಾಮಾಂತರ ಮಟ್ಟದಲ್ಲಿ ಇರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಗಮನಕ್ಕೆ ತರುವ ಕೆಲಸ ಮಾಡಬೇಕು. ಗ್ರಾಮ ಪಂಚಾಯಿತಿ ಮಟ್ಟದಿಂದಲೂ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುವ ರಾಜಕಾರಣಿಗಳನ್ನು ಆಯ್ಕೆ ಮಾಡಬೇಕು. ಆಗ ಮಾತ್ರ ಸಂಪೂರ್ಣ ಗ್ರಾಮದ ಅಭಿವೃದ್ಧಿಯಾಗುತ್ತದೆ ಎಂದರು.

ಅನ್ಯ ಪಕ್ಷದವರ ಮಾತಿನ ಮೋಡಿಗೆ ಮತದಾರರು ಮರುಳಾಗಬಾರದು, ರೈತರ ಸಮಸ್ಯೆಗಳ ಬಗ್ಗೆ ಸಂಪೂರ್ಣವಾದ ಕಾಳಜಿ ಹೊಂದಿರುವ ಪಕ್ಷ ಜೆಡಿಎಸ್ ಮಾತ್ರ ಎಂದರು.

ಈ ಸಂದರ್ಭದಲ್ಲಿ ತಿರುಮಲಾಪುರ, ಸುಳಗೋಡು, ಹಬಟೂರು, ಪಾರೆಕೊಪ್ಪಲು, ಮುಮ್ಮಡಿಕಾವಲು, ಸತ್ಯಗಾಲ ಬಿ.ಕಾವಲು, ಮುಂತಾದ ಗ್ರಾಮದಲ್ಲಿ ಒಟ್ಟು 1.30 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದರು.

ಪುರಸಭೆ ಅಧ್ಯಕ್ಷ ಕೆ.ಮಹೇಶ್, ಮಾಲಂಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ರೈತ ಸಂಘದ ಉಪಾಧ್ಯಕ್ಷ ಬಿ.ಜೆ.ದೇವರಾಜು, ಕಂದಾಯ ನಿರೀಕ್ಷಕ ಪಾಂಡು, ಮುಖಂಡರಾದ ಚಂದ್ರು, ಪಿ.ಬಿ.ಸ್ವಾಮಿ ಇತರರಿದ್ದರು.