ಕುಶಾಲನಗರ: ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆಯಲ್ಲಿರುವ ಸರ್ವೇ ನಂ.148ರಲ್ಲಿರುವ ನಿವೇಶನವನ್ನು ಗುರುವಾರ ತಹಸೀಲ್ದಾರ್ ಗೋವಿಂದರಾಜು ನೇತೃತ್ವದಲ್ಲಿ ಸರ್ವೇ ನಡೆಸಲಾಯಿತು.
ಮುಬಿನ್ ತಾಜ್ ಎಂಬ ಮಹಿಳೆ ನಳಿನಿ ಶೇಷಾದ್ರಿ ಮತ್ತು ಕುಟುಂಬದವರು ತಮ್ಮ ನಿವೇಶನದ ಜತೆಯಲ್ಲಿ ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ. ಅತಿಕ್ರಮಿಸಿಕೊಂಡಿರುವ ಜಾಗದಲ್ಲಿ ಮಹಾಕಾಳಿ ದೇವಿಯ ವಿಗ್ರಹ ಭೂಮಿಯ ಒಳಗಡೆ ಇದೆ. ಅದನ್ನು ತೆಗೆಯಲು ಅನುಮತಿ ನೀಡಬೇಕೆಂದು ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದರು. ಮಹಿಳೆಯ ಮನವಿ ಮೇರೆಗೆ ಸರ್ವೇ ಕಾರ್ಯ ಮಾಡಲಾಯಿತು.
ಸರ್ವೇ ನಡೆಸಿದ ಇಲಾಖೆಯ ನೌಕರರ ಪ್ರಾಥಮಿಕ ವರದಿ ಪ್ರಕಾರ 148ರಲ್ಲಿ ಯಾವುದೇ ಸರ್ಕಾರಿ ಜಮೀನು ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಸರ್ವೇ ನಡೆಸಿದ ದಿಲೀಪ್ ತಿಳಿಸಿದ್ದಾರೆ.
ಖಾಸಗಿ ಜಾಗವೆಂದು ದೃಢಪಟ್ಟರೆ ಮುಬಿನ್ ತಾಜ್ ಅವರು ಏನೂ ಮಾಡಲು ಆಗುವುದಿಲ್ಲ. ಅವರು ಕೋರ್ಟ್ ನಲ್ಲಿ ಪ್ರಶ್ನೆ ಮಾಡಬೇಕಾಗುತ್ತದೆ. ಸರ್ಕಾರಿ ಜಾಗವಾದರೂ ಸರ್ಕಾರದ ಮಟ್ಟದಲ್ಲಿ ಅನುಮತಿ ಪಡೆಯಬೇಕಾಗುತ್ತದೆ ಎಂದು ತಿಳಿಸಿದರು.
ಒಟ್ಟಿನಲ್ಲಿ ಈ ವಿಚಾರಕ್ಕೆ ಒಂದು ತಾರ್ಕಿಕ ಅಂತ್ಯ ಸಿಗಬೇಕು ಎಂದು ನಳಿನಿ ಶೇಷಾದ್ರಿ ಅವರ ಹಿರಿಯ ಮಗ ಆನಂದ ಸಾಗರ್ ತಹಸೀಲ್ದಾರ್ ಅವರನ್ನು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ತಹಸೀಲ್ದಾರ್ ಗೋವಿಂದರಾಜು ಮಾತನಾಡಿ, ಈ ಹಿಂದೆ ನಿಗದಿಪಡಿಸಿದಂತೆ ಸರ್ವೇ ಕಾರ್ಯ ನಡೆಸಿದ್ದೇವೆ. ಸರ್ವೇ ವರದಿ ಅಧಿಕೃತವಾಗಿ ಬಂದ ನಂತರ ಅದರ ಅನುಸಾರ ಕಾನೂನು ಕ್ರಮ ಪಾಲಿಸಲಾಗುವುದು ಎಂದು ತಿಳಿಸಿದರು.
ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಜಯ್ ಕುಮಾರ್, ಕಂದಾಯ ಇಲಾಖೆಯ ಮದನ್ ಕುಮಾರ್, ವಿ.ಎ.ಗೌತಮ್, ಪಂಚಾಯಿತಿ ಅಧಿಕಾರಿ ಸತೀಶ್ ಮುಂತಾದವರು ಹಾಜರಿದ್ದರು.