ಜಿಲ್ಲೆ

ವಿವಾದಕ್ಕೆ ಕಾರಣವಾದ ಎನ್‌ಒಸಿ: ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಬೇಕು ಠಾಣೆ ನಿರಾಕ್ಷೇಪಣಾ ಪತ್ರ

ಮೈಸೂರು: ಕನ್ನಡ ರಾಜ್ಯೋತ್ಸವ ಅಂಗವಾಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗೌರವಿಸುವ ‘ಜಿಲ್ಲಾ ಮಟ್ಟದ ಸನ್ಮಾನ’ಕ್ಕೆ ಅರ್ಜಿ ಸಲ್ಲಿಸುವವರು ಪೊಲೀಸ್ ಠಾಣೆಯಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಪಡೆಯುವುದು ಕಡ್ಡಾಯಗೊಳಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ನಗರದ ಓವೆಲ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ನ.1ರಂದು ನಡೆಯಲಿದ್ದು, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸಿದವರು, ಸಾಹಿತ್ಯ, ಶಿಕ್ಷಣ, ಸಂಸ್ಕೃತಿ, ಸಮಾಜಸೇವೆ, ವಿಜ್ಞಾನ, ವೈದ್ಯಕೀಯ, ಕೃಷಿ, ತಂತ್ರಜ್ಞಾನ, ಕಲೆ, ಸಂಘಟನೆ, ನ್ಯಾಯಾಂಗ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನು ಬಯಸಿ ಅರ್ಜಿ ಸಲ್ಲಿಸುವವರು ಎನ್‌ಒಸಿಯನ್ನೂ ಸಹ ಕೊಡಬೇಕಿದೆ.

ಕಳೆದ ಸಾಲಿನಲ್ಲಿ ಸನ್ಮಾನ ನೀಡಿದ ಬಳಿಕ ಅವರ ಪೂರ್ವಾಪರವನ್ನು ಪೊಲೀಸರ ಮೂಲಕ ಪರಿಶೀಲಿಸಲಾಗಿತ್ತು. ಜಿಲ್ಲಾಡಳಿತ ಮೊದಲು ಸನ್ಮಾನಿಸಿ, ನಂತರ ಅಪಮಾನ ಮಾಡುತ್ತದೆ ಎಂಬ ಕೆಲವರು ಆಕ್ಷೇಪಿಸಿದ್ದರು. ಈ ಸಲ ಮುಂಚಿತವಾಗಿಯೇ ಎನ್‌ಒಸಿ ಪಡೆದುಕೊಳ್ಳಲಾಗುತ್ತಿದೆ. ಮೊದಲ ಸಲ ಈ ರೀತಿ ಕ್ರಮ ಅನುಸರಿಸಲಾಗಿದೆ. ಇದು ವಿರೋಧಕ್ಕೆ ಕಾರಣವಾಗಿದೆ.

ಕಳೆದ ಬಾರಿ 53 ಜನರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಸನ್ಮಾನವಾಗಿತ್ತು. ‘ಸಮಾಜಸೇವೆ’ ವಿಭಾಗದಲ್ಲಿ ಜನನಿ ಸೇವಾ ಟ್ರಸ್ಟ್‌ನ ಎಂ.ಕೆ.ಅಶೋಕ್ ಎನ್ನುವವರನ್ನು ಸನ್ಮಾನಿಸಲಾಗಿತ್ತು. ಅವರ ವಿರುದ್ಧ ಲಷ್ಕರ್ ಹಾಗೂ ದೇವರಾಜ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ರೌಡಿಶೀಟ್ ತೆರೆದಿದ್ದಾರೆ.

ಈ ಪೂರ್ವಾಪರ ವಿಚಾರಿಸದೇ ಅವರನ್ನು ಪರಿಗಣಿಸಿದ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಬಳಿಕ ಎಚ್ಚೆತ್ತುಕೊಂಡ ಜಿಲ್ಲಾಡಳಿತವು ಪುರಸ್ಕಾರವನ್ನು ವಾಪಸ್ ಪಡೆದಿತ್ತು. ಈ ಹಿನ್ನೆಲೆಯಲ್ಲಿ ‘ಎನ್‌ಒಸಿ’ ಕೇಳಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಹಿಂದೆ ಈ ಪ್ರಕ್ರಿಯೆಯನ್ನು ಇಲಾಖೆಯಿಂದಲೇ ಮಾಡಿಕೊಳ್ಳಲಾಗುತ್ತಿತ್ತು. ಸನ್ಮಾನಕ್ಕೆ ಆಯ್ಕೆ ಮಾಡುವ ಮುನ್ನ ಎಚ್ಚರಿಕೆಯಿಂದ ಪರಿಶೀಲನೆ ಮಾಡಲಾಗುತ್ತಿತ್ತು. ಇದೀಗ ಎನ್‌ಒಸಿ ತರುವಂತೆ ಕೇಳುತ್ತಿರುವುದು ವಿವಿಧ ಕ್ಷೇತ್ರದ ಸಾಧಕರ ಅಸಮಾಧಾನಕ್ಕೂ ಕಾರಣವಾಗಿದೆ.

ಈ ಕ್ರಮವನ್ನು ಸಮರ್ಥಿಸಿಕೊಂಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಅವರು, ಸನ್ಮಾನಕ್ಕೆ ಅರ್ಜಿ ಹಾಕುವವರಿಗೆ ಮಾತ್ರ ಎನ್‌ಒಸಿ ಅನ್ವಯವಾಗುತ್ತದೆ. ಕೆಲವರು ತಂದುಕೊಡುತ್ತಿದ್ದಾರೆ. ನಾವೇ ಗುರುತಿಸುವ ಸಾಧಕರ ಪೂರ್ವಾಪರವನ್ನು ನಾವೇ ಪರಿಶೀಲನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಿ ಸನ್ಮಾನ ಪಡೆಯವುದು ಮುಜುಗರವಾಗಲಿದೆ. ಎನ್‌ಒಸಿಯನ್ನೂ ಕೊಡಬೇಕು ಎಂದು ಕೇಳಿದರೆ, ಅರ್ಹ ಸಾಧಕರು ದೂರ ಉಳಿಯುವ ಸಾಧ್ಯತೆ ಇದೆ. ಅನೇಕ ಸಾಧಕರು ತೆರೆಮರೆಯಲ್ಲಿದ್ದುಕೊಂಡೇ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಅಂಥವರನ್ನು ಗುರುತಿಸುವ ಕೆಲಸವಾಗಬೇಕು ಎಂದು ಒತ್ತಾಯ ಕೇಳಿ ಬಂದಿದೆ.

ಈ ಸಲ ವಿವಿಧ ಕ್ಷೇತ್ರದ 50 ಸಾಧಕರಿಗೆ ಜಿಲ್ಲಾ ಮಟ್ಟದ ಸನ್ಮಾನ ನೀಡಲು ತೀರ್ಮಾನಿಸಲಾಗಿದೆ. ಅ.29ರಂದು ಸಭೆ ನಡೆಯಲಿದ್ದು ಸನ್ಮಾನಿತರ ಪಟ್ಟಿ ಅಂತಿಮಗೊಳಿಸಲಾಗುತ್ತದೆ.