ಜಿಲ್ಲೆ

ವಿವಾದ ಸೃಷ್ಠಿಸಿದ ಆಧ್ಯಾತ್ಮಿಕ ಪ್ರವಚನ

ಯಾದಗಿರಿ: ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ವಿರಕ್ತ ಮಠದ ಶ್ರೀರಾಚೇಶ್ವರ ಮಹಾಶಿವಯೋಗಿಗಳ 555ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಆಯೋಜನೆ ಮಾಡಿರುವ ಸಂಚಾರಿ ಶಿವಾನುಭವ ಪ್ರವಚನ ಕಾರ್ಯಕ್ರಮ ಇದೀಗ ವಿವಾದ ಪಡೆದುಕೊಂಡಿದೆ.

ಕಾನೂನು, ಸುವ್ಯವಸ್ಥೆ ಪಾಲನೆ ಹಿನ್ನೆಲೆಯಲ್ಲಿ ಪ್ರವಚನ ನಡೆಯುವ ದಿನಗಳಂದು ಸಂಜೆ 6ರಿಂದ ರಾತ್ರಿ 10 ಗಂಟೆವರೆಗೆ ನಿಷೇದಾಜ್ಞೆ ಜಾರಿಗೊಳಿಸಿ ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಆದೇಶಿಸಿದ್ದಾರೆ. ಕೊಡೇಕಲ್ ಗ್ರಾಮದಲ್ಲಿ ರಾಚೇಶ್ವರ ಮಹಾಶಿವಯೋಗಿಗಳು ಕಾಲ್ಪನಿಕ ಹೆಸರು ಬಳಕೆ ಮಾಡಿಕೊಂಡು ಕೆಲವರು ಸಂಚಾರಿ ಶಿವಾನುಭವಗೋಷ್ಠಿ ಹೆಸರಲ್ಲಿ ಪ್ರವಚನ ನಡೆಸುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹುಣಸಗಿ ಘಟಕ ತಹಸಿಲ್ದಾರರಿಗೆ ದೂರು ಸಲ್ಲಿಸಿದೆ.

ಇನ್ನೂ ಪ್ರವಚನ ಕಾರ್ಯಕ್ರಮದ ಬಗ್ಗೆ ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಆಯೋಜಕರು ಅನುಮತಿ ಪಡೆದುಕೊಂಡಿಲ್ಲ ಎಂದು ಉಲ್ಲೇಖಿಸಿರುವ ಆಯುಕ್ತರು, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೊಡೇಕಲ್ ಗ್ರಾಮದಲ್ಲಿ ನಡೆದ ಬಸವೇಶ್ವರರರ ಜಾತ್ರೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಮಧ್ಯೆ ಮಾರಾಮಾರಿ ನಡೆದು, ಪ್ರಕ್ಷುಬ್ಧ ವಾತಾವರಣ ನಿಮರ್ಾಣಗೊಂಡಿತ್ತು. ಅಲ್ಲದೆ ಸಧ್ಯ ತಾಲೂಕಿನ ಮಾರನಾಳ ಗ್ರಾಮದಲ್ಲೂ ಸಹ ಅಹಿತಕರ ಘಟನೆ ನಡೆಯುವ ಸಾಧ್ಯತೆ ಇರುವುದರಿಂದ ಮುಂಜಾಗೃತಾ ಕ್ರಮವಾಗಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಲೂಕಿನ ಮಾರನಾಳ ಗ್ರಾಮದಲ್ಲಿ ಆ.17ರಿಂದ 21ರವರೆಗೆ ಬೂದಿಹಾಳದಲ್ಲಿ 21ರಿಂದ 28ರ ವರೆಗೆ, ಹಗರಟಗಿಯಲ್ಲಿ 27ರಿಂದ 31, ರಾಜನಕೊಳ್ಳೂರು ಸೆ.01ರಿಂದ 07, ಎಣ್ಣಿ ವಡಿಗೇರಾದಲ್ಲಿ 06ರಿಂದ 10 ಮತ್ತು ಕೊಡೇಕಲ್ ಗ್ರಾಮದಲ್ಲಿ 10ರಿಂದ 17ರ ವರೆಗೆ ನಿಷೇದಾಜ್ಞೆ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ.
ಭಕ್ತರಿಂದ ಹುಣಸಗಿಯಲ್ಲಿ ಪ್ರತಿಭಟನೆ: ಶ್ರೀರಾಚೇಶ್ವರ ಮಹಾಶಿವಯೋಗಿಗಳ 555ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಆಯೋಜಿಸಿರುವ ಆಧ್ಯಾತ್ಮಿಕ ಪ್ರವಚನ ನಡೆಸಲು ಅನುಮತಿ ಕೊಡುವಂತೆ ಒತ್ತಾಯಿಸಿ ಕೊಡೇಕಲ್ ವಿರಕ್ತ ಮಠದ ಭಕ್ತರು ಹುಣಸಗಿ ಪಟ್ಟಣದ ಪೊಲೀಸ್ ಠಾಣೆ ಮುಂದೆ ಗುರುವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಬಿಜೆಪಿ ಯುವ ಮುಖಂಡ ಬಬ್ಲುಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಲೋಕ ಕಲ್ಯಾಣಕ್ಕಾಗಿ ಹಾಗೂ ಪವಿತ್ರ ಶ್ರಾವಣ ಮಾಸದಲ್ಲಿ ಯುವ ಜನತೆ ದುಶ್ಚಟದಿಂದ ವಿಮುಖಗೊಳಿಸಲು ಆಧ್ಯಾತ್ಮಿಕ ಪ್ರವಚನ ಆಯೋಜನೆ ಮಾಡಲಾಗಿದೆ. ಆದರೆ, ಕೆಲವರು ಇದಕ್ಕೆ ಬೇಕು ಅಂತಲೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಭಕ್ತರು ಆರೋಪಿಸಿದರು.

ತಾಲೂಕಾಡಳಿತ ನಮಗೆ ಕಾರ್ಯಕ್ರಮ ನಡೆಸಲು ಅವಕಾಶ ಕೊಡದಿದ್ದರೆ, ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಅಗಡಿ ಅಕ್ಕಿ ಮಠದ ಶ್ರೀ ಗುರುಲಿಂಗ ಮಹಾಸ್ವಾಮಿಗಳು, ಗದುಗಿನ ನಾಗಭೂಷಣ ದೇವರು, ನೀಲಕಂಠ ಸ್ವಾಮಿ ವಿರಕ್ತಮಠ ಇದ್ದರು.