ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಹೆಸರು ವಿರೋಧ ಮಾಡಿದವರಿಗೆ ನ್ಯಾಯಾಲಯವು ಸಂವಿಧಾನದ ಮೂಲಕವೇ ಬಾಯಿಗೆ ಬೀಗ ಹಾಕಿದೆ. ಇನ್ನಾದರೂ ಆ ರೀತಿಯ ವಿರೋಧ ನಿಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕುಟುಕಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯ ಹೇಳಿದ ಮೇಲೂ ಆ ಹೆಸರಿಗೆ ವಿರೋಧ ಮಾಡುವುದು ಸರಿಯಲ್ಲ. ನಾನು ಎಲ್ಲರನ್ನೂ ಮುಕ್ತ ಮನಸ್ಸಿನಿಂದ ದಸರಾಗೆ ಆಹ್ವಾನ ನೀಡುತ್ತಿದ್ದೇನೆ. ಇದು ಎಲ್ಲ ಧರ್ಮದ ಜನರ ನಾಡಹಬ್ಬ. ಇದನ್ನು ಸಂತೋಷದಿಂದ ಆಚರಿಸೋಣ ಎಂದು ಕೋರಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮೂಲಕ ಹಿಂದು ಧರ್ಮ ಒಡೆಯುತ್ತೇವೆ ಎಂಬುದು ಶುದ್ಧ ಸುಳ್ಳು. ಸಿದ್ದರಾಮಯ್ಯ ಏಕೆ ಹಿಂದು ಧರ್ಮ ಒಡೆಯುತ್ತಾರೆ. ಧರ್ಮ ಒಡೆಯುವ ಪ್ರಶ್ನೆಯೇ ಇಲ್ಲ. ನಾವು ಇದನ್ನು ಮಾಡುತ್ತಿರುವುದು ಜಾತಿಗಳ ಸ್ಥಿತಿಗಳ ಅಧ್ಯಯನಕ್ಕಾಗಿ. ಧರ್ಮ ಒಡೆಯುವುದು ನಮ್ಮ ಕೆಲಸ ಅಲ್ಲ. ಅದು ಬಿಜೆಪಿಯ ಕೆಲಸ. ಇದಕ್ಕಾಗಿ ಬಿಜೆಪಿ ಸುಳ್ಳು ಹಬ್ಬಿಸುತ್ತಿದೆ ಎಂದು ತಿರುಗೇಟು ನೀಡಿದರು.
ಯಾರಾದರೂ ಮತಾಂತರ ಆಗುತ್ತೇವೆ ಎಂದರೆ ಅದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಅದು ಅವರವರ ಸ್ವಾತಂತ್ರ್ಯ. ಆ ಸ್ವಾತಂತ್ರ್ಯಕ್ಕೆ ಅಡ್ಡಿ ಮಾಡಲು ನಾವ್ಯಾರು. ಅಂಬೇಡ್ಕರ್ ಅವರೇ ‘ನಾನು ಹಿಂದುವಾಗಿ ಹುಟ್ಟಿದ್ದೇನೆ. ಹಿಂದುವಾಗಿ ಸಾಯಲ್ಲ’ ಎಂದಿದ್ದರು.
ಕೆಲವರು ಅದನ್ನು ಪರಿಪಾಲನೆ ಮಾಡುತ್ತಿರಬಹುದು. ನಾವು ಹೊಸ ಜಾತಿಗಳನ್ನು ಸೃಷ್ಟಿ ಮಾಡುತ್ತಿಲ್ಲ. ಹೊಸ ಜಾತಿಗಳನ್ನು ಸೃಷ್ಟಿ ಮಾಡಲು ಸಾಧ್ಯ ಇದೆಯೇ ಹೇಳಿ. ಮತಾಂತರ ಆಗಿದ್ದವರ ಮೂಲ ಜಾತಿಯನ್ನು ನಮೂದಿಸಿದ್ದೇವೆಯಷ್ಟೇ.
ಅದರಲ್ಲಿ ಏನು ತಪ್ಪಿದೆ ಹೇಳಿ. ಬಿಜೆಪಿ ನಮ್ಮ ಎಲ್ಲ ಒಳ್ಳೆಯ ಕೆಲಸಗಳಿಗೆ ವಿವಾದ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಅದು ಅವರ ಮನಸ್ಥಿತಿ ಎಂದು ಹರಿಹಾಯ್ದರು.