ಚಿಕ್ಕಮಗಳೂರಿನ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಶ್ರೀ ದೇವಿ ಗುರುಕುಲದ ೮ನೆಯ ವಾರ್ಷಿಕೋತ್ಸವ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಕಾರ್ಯಕ್ರಮವನ್ನು ಶ್ರೀಶೈಲಪೀಠದ ಶ್ರೀಮದ್ ಶ್ರೀ ೧೦೦೮ ಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಉದ್ಘಾಟಿಸಿದರು. ಎಚ್‌.ಡಿ.ತಮ್ಮಯ್ಯ, ಸಿ.ಟಿ.ರವಿ, ಡಾ.ಅಭಿನವಸಿದ್ದಲಿಂಗ ಶಿವಾಚಾರ್ಯಸ್ವಾಮೀಜಿ,ಬೇರುಗಂಡಿ ಮಠದ ಶ್ರೀರೇಣುಕಮಹಾಂತ ಶಿವಾಚಾರ್ಯರು, ಬೀರೂರಿನ ಶ್ರೀರುದ್ರಮುನಿ ಶಿವಾಚಾರ್ಯರು, ಶಂಕರದೇವರ ಮಠದ ಶ್ರೀಚಂದ್ರಶೇಖರ ಶಿವಾಚಾರ್ಯರು ಉಪಸ್ಥಿತರಿದ್ದರು. 
ಜಿಲ್ಲೆ

ವಿರೋಧ ರಹಿತವಾದುದ್ದೇ ವೀರಶೈವ

ಚಿಕ್ಕಮಗಳೂರು: ವಿರೋಧ ರಹಿತವಾದದ್ದೇ ವೀರಶೈವ. ಪ್ರಧಾನ ತತ್ವತ್ರಯಗಳನ್ನು ಪ್ರತಿನಿಧಿಸುವ ೮೫೬ ವೀರಶೈವ ಧರ್ಮದ ಸಂಕೇತ. ಇದನ್ನು ಸದಾ ಸ್ಮರಣೆಯಲ್ಲಿಟ್ಟುಕೊಳ್ಳಬೇಕು ಎಂದು ಶ್ರೀಶೈಲಪೀಠದ ಶ್ರೀಮದ್ ಶ್ರೀ ೧೦೦೮ ಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.

ನಗರದ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಶ್ರೀ ದೇವಿ ಗುರುಕುಲದ ೮ನೆಯ ವಾರ್ಷಿಕೋತ್ಸವ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲಿಂಗಧರಿಸಿ, ನಿತ್ಯ ಲಿಂಗಪೂಜೆ, ಇತರೆ ಎಲ್ಲ ಧರ್ಮಿಯರನ್ನು ಪ್ರೀತಿ-ವಿಶ್ವಾಸ-ಗೌರವದಿಂದ ನೋಡುವುದರ ಜೊತೆಗೆ ವಿರೋಧ ರಹಿತವಾದ ಜೀವನ ನಡೆಸುವವರೆ ಸಾಮಾಜಿಕವಾಗಿ ವೀರಶೈವ ಎಂದನೆಸಿಕೊಳ್ಳುತ್ತಾನೆ. ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಲಗಳು ವೀರಶೈವ ಧರ್ಮದ ಪ್ರಧಾನ ತತ್ವತ್ರಯಗಳಾದ ಸಂಕೇತಗಳು. ಇದರ ಬಗ್ಗೆ ಪ್ರತಿಯೊಬ್ಬರೂ ಕನಿಷ್ಟ ತಿಳುವಳಿಕೆ ಹೊಂದುವುದು ಅತ್ಯಗತ್ಯ ಎಂದರು.

ತತ್ವತ್ರಯಗಳನ್ನು ವೀರಶೈವ ಲಿಂಗಾಯತ ಸಂಸ್ಕೃತಿಯ ಎಲ್ಲ ಜಾತಿ, ಉಪಜಾತಿ, ಗುಂಪು ಸಂಪ್ರದಾಯ, ಸಮುದಾಯಗಳು ಒಪ್ಪಿಕೊಳ್ಳುತ್ತದೆ. ೮೫೬ಅನ್ನು ಯಾರೂ ವಿರೋಧಿಸುವ, ಆಕ್ಷೇಪಿಸುವ, ತಕರಾರು ತೆಗೆಯುವ ಸಂಭವವೇ ಇಲ್ಲ. ಸರ್ವರೂ ಒಪ್ಪಿಕೊಳ್ಳುವ ಸಂಕೇತವನ್ನು ವ್ಯಾಪಕವಾಗಿ ಸಮುದಾಯದಲ್ಲಿ ಪ್ರಚುರಪಡಿಸುವ ಅಗತ್ಯವಿದೆ. ಈ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ವೇದ ಮಂತ್ರಗಳಲ್ಲಿ ಅಗಾಧಶಕ್ತಿ ಇದೆ. ಭಜನೆಯಿಂದ ಉತ್ತಮ ಪ್ರೇರಣೆ ಸಿಗುತ್ತದೆ. ಇವೆಲ್ಲವನ್ನೂ ಮೈಗೂಡಿಸಿಕೊಂಡಾಗ ಸತ್‌ಪ್ರಜೆಗಳಾಗಲು ಪ್ರಭಾವವಾಗುತ್ತದೆ. ಶ್ರೀ ದೇವಿ ಗುರುಕುಲ ಈ ನಿಟ್ಟಿನಲ್ಲಿ ಅಭಿನಂದನೀಯ ಕಾರ್ಯ ಮಾಡುತ್ತಿದೆ. ಜಾತಿ, ಮತ, ಪಂಥ, ಅಂತಸ್ತು, ಭಿನ್ನತೆಗಳನ್ನು ಬದಿಗಿಟ್ಟು ಸಮಾಜವನ್ನು ಒಗ್ಗೂಡಿಸಲು ಶ್ರಮಿಸುತ್ತಿದೆ ಎಂದರು.

ದೇಶ, ಧರ್ಮದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದು ಅತ್ಯಗತ್ಯ. ದೇಹಾಭಿಮಾನಕ್ಕಿಂತ ದೇಶಾಭಿಮಾನ ದೊಡ್ಡದ್ದು. ಧನಾಭಿಮಾನಕ್ಕಿಂತ ಧರ್ಮಾಭಿಮಾನ ರೂಢಿಸಿಕೊಳ್ಳುವುದು ಅಗತ್ಯ. ವಿವಿಧ ಸಂಪ್ರದಾಯಗಳಿದ್ದರೂ ಸಕಾರಾತ್ಮಕವಾಗಿ ಸೌಹಾರ್ದಯುತವಾದ ಬದುಕಿಗೆ ಆದ್ಯತೆ ನೀಡಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.

ವಿದ್ಯೆಯ ಜೊತೆಗೆ ಸಂಸ್ಕಾರ ಮೇಳೈಸಬೇಕು. ಜ್ಞಾನ, ಶಕ್ತಿ, ಹಣ ಸರಿದಾರಿಯಲ್ಲಿ ಸಾಗಲು ಸಂಸ್ಕಾರ ಅವಶ್ಯ. ಶಕ್ತಿ ಆತ್ಮರಕ್ಷಣೆಗೇ ಹೊರತು ಇನ್ನೊಬ್ಬರನ್ನು ಹಿಂಸಿಸುವುದಕ್ಕಲ್ಲ. ಜ್ಞಾನ ಸಂವಹನಕ್ಕೆ ಬಳಕೆಯಾಗಬೇಕೆ ಹೊರತು ಅಹಂಕಾರಕ್ಕಲ್ಲ. ಹಣ ದಾನಕ್ಕೆ ಹೊರತು ದರ್ಪಕ್ಕಲ್ಲ ಎಂಬುದನ್ನು ಅರ್ಥ ಮಾಡಿಸುವುದೇ ಸಂಸ್ಕೃತಿ. ಮಾತಾ-ಪಿತರು, ಆಚಾರ್ಯರು, ಅತಿಥಿಗಳು ದೇವರ ಸಮಾನ. ಬದುಕಿನ ಜೀವನದ ಮೌಲ್ಯ ಅರಿತು ಬಾಳಬೇಕು. ಪ್ರಾಚೀನ ಗುರುಕುಲಗಳು ಕುಟುಂಬ ವ್ಯವಸ್ಥೆಯನ್ನು ಸರಿಪಡಿಸಲು ಪೂರಕವಾಗಿದ್ದವು. ಅನ್ನದಾತ ರೈತ, ವಿದ್ಯೆ ಕಲಿಸುವ ಗುರು ಮತ್ತು ರಕ್ಷಣೆ ಮಾಡುವ ಸೈನಿಕರನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಸನಾತನ ಪರಂಪರೆಯ ಸಂರಕ್ಷಣೆಗೆ ಪಂಚಪೀಠಗಳು ಉತ್ತಮ ಕೊಡುಗೆ ನೀಡಿವೆ. ಇಂದು ಶ್ರೀಶೈಲ ಜಗದ್ಗುರುಗಳು ನಗರಕ್ಕೆ ಆಗಮಿಸಿದ ಫಲ ವೀರಶೈವ ಮಹಿಳೆ ಪ್ರಥಮ ಪ್ರಜೆ ನಗರಸಭಾಧ್ಯಕ್ಷರಾಗಿ ಪ್ರಥಮಬಾರಿಗೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಮಳೆ, ಬೆಳೆ, ಬೆಲೆ ಸುಭೀಕ್ಷೆಗೊಂಡು ಆರೋಗ್ಯಪೂರ್ಣ ಸಮಾಜಕ್ಕೆ ಪೂಜ್ಯರ ಆಶೀರ್ವಾದ ಬಲನೀಡುತ್ತದೆ ಎಂದರು.

ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಪ್ರಾಚೀನ ಪರಂಪರೆಯ ಮುಂದುವರಿಕೆಗೆ ದೇವಿ ಗುರುಕುಲ ಶ್ರಮಿಸುತ್ತಿದೆ. ಶ್ರೀಶೈಲಪೀಠ ಸೇರಿದಂತೆ ಪಂಚಪೀಠಗಳು ಧರ್ಮಾಚರಣೆಗೆ ನಿರಂತರವಾಗಿ ಶ್ರಮಿಸುತ್ತಿವೆ. ಸಮಾಜದಲ್ಲಿ ಸಾಮರಸ್ಯ ಸದ್ಭಾವನೆ ಪ್ರೇರೇಪಿಸುತ್ತಿವೆ ಎಂದು ಹೇಳಿದರು.

ಶ್ರೀ ದೇವಿ ಗುರುಕುಲ ಸಂಸ್ಥಾಪಕ ವಿದ್ವಾನ್ ಡಾ.ದಯಾನಂದಮೂರ್ತಿ ಶಾಸ್ತ್ರಿ ಮಾತನಾಡಿ, ಮಾನವನಾಗಿ ಹುಟ್ಟಿದ ಮೇಲೆ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕೆಂಬ ಹಿರಿಯರ ಆಶಯದಂತೆ ಎಂಟುವರ್ಷದ ಹಿಂದೆ ಶ್ರೀ ದೇವಿ ಗುರುಕುಲವನ್ನು ಸ್ಥಾಪಿಸಲಾಯಿತು. ಆರು ಶಾಖೆಗಳ ಮೂಲಕ ೧,೫೦೦ಕ್ಕೂ ಹೆಚ್ಚು ಮಹಿಳೆಯರು ಹಾಗೂ ಪುರುಷರು ಒಂದಷ್ಟು ವೇದಮಂತ್ರಗಳನ್ನು ಕಲಿತಿದ್ದಾರೆ. ಪಂಚಪೀಠದ ಐವರು ಜಗದ್ಗುರುಗಳು, ನಾಡಿನ ಪ್ರಮುಖ ಶಿವಾಚಾರ್ಯರೂ ಗುರುಕುಲದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಆಶೀರ್ವದಿಸಿರುವುದು ಅಭಿಮಾನದ ಸಂಗತಿ ಎಂದರು.

ಆಶಾಕಿರಣ ಶಾಲೆ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಜನಸಾಮಾನ್ಯರಿಗೆ ವೇದ ಮಂತ್ರಗಳು ಭಜನೆಯ ಮೂಲಕ ಸರಳವಾಗಿ ಸಂಸ್ಕೃತಿ-ಸಂಸ್ಕಾರ ಕಲಿಸುವ ಗುರುಕುಲಗಳು ಇಂದಿನ ಅಗತ್ಯ. ಶ್ರೀ ದೇವಿ ಗುರುಕುಲ ರಾಜ್ಯಮಟ್ಟದಲ್ಲಿ ವಿಸ್ತಾರವಾಗಲಿ. ಗುರುಕುಲಗಳಿಗೆ ಸರ್ಕಾರ ವಿಶೇಷ ಅನುದಾನ ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಒತ್ತಾಯಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಗುರುಕುಲದ ಮಹಾಪೋಷಕ ಪ್ರಭುಲಿಂಗಶಾಸ್ತ್ರಿ ಮಾತನಾಡಿ, ನಾದಮಯವಾದ ಜಗವಿದು. ಓಂಕಾರವೇ ಜಗತ್ತಿನ ಆದಿ. ಲಿಂಗರೂಪಿ ಜಗವೆಂಬ ಮಾತಿದೆ. ಶಿವಸ್ವರೂಪಿ ಸಂಸ್ಕೃತಿ ಸನಾತನ. ಸನಾತನವೇ ವೀರಶೈವವಾಗಿ ವಿಕಸಿತಗೊಂಡಿದೆ. ವೇದ, ಉಪನಿಷತ್ತು, ಆಗಮಗಳು ಸನಾತನ ಪರಂಪರೆಯ ಕೊಡುಗೆ. ವೇದದ ಸಾರ ಜನಮಾನಸಕ್ಕೆ ತಲುಪಿಸುವಲ್ಲಿ ಗುರುಕುಲ ಶ್ರಮಿಸುತ್ತಿದೆ ಎಂದರು.

ಕೃಷಿಯಲ್ಲಿ ವಿಶಿಷ್ಟ ಸಾಧನೆ ಮಾಡಿದ ಐದು ದಂಪತಿಗಳನ್ನು ಗೌರವಿಸುವ ‘ರೈತ ನಮನ’ ಮತ್ತು ಸರ್ಕಾರಿಶಾಲೆಗಳಲ್ಲಿ ಉತ್ತಮ ಸೇವೆಸಲ್ಲಿಸಿ ನಿವೃತ್ತಗೊಂಡ ಆರು ಶಿಕ್ಷಕರಿಗೆ ‘ಗುರು ನಮನ’ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಯ ಕಾಯಿಯಂತೆ ಸೇವೆಸಲ್ಲಿಸಿದ ಕುಮಾರಶರ್ಮ ಮತ್ತಿತರರನ್ನು ವಿಶೇಷ ‘ಗುರುರಕ್ಷೆ’ ನೀಡಿ ಗೌರವಿಸಲಾಯಿತು.

ತಾವರೆಕೆರೆ ಶಿಲಾಮಠದ ಡಾ.ಅಭಿನವಸಿದ್ದಲಿಂಗ ಶಿವಾಚಾರ್ಯಸ್ವಾಮೀಜಿ ಸನಾತನ ಧಾರ್ಮಿಕ ಆಚರಣೆಗಳು ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು. ಬೇರುಗಂಡಿ ಮಠದ ಶ್ರೀರೇಣುಕಮಹಾಂತ ಶಿವಾಚಾರ್ಯರು, ಬೀರೂರಿನ ಶ್ರೀರುದ್ರಮುನಿ ಶಿವಾಚಾರ್ಯರು ಮಾತನಾಡಿದರು.

ಹುಲಿಕೆರೆದೊಡ್ಡಮಠದ ಶ್ರೀವಿರೂಪಾಕ್ಷಲಿಂಗ ಶಿವಾಚಾರ್ಯರು ಮತ್ತು ಶ್ರೀಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು, ಶಂಕರದೇವರ ಮಠದ ಶ್ರೀಚಂದ್ರಶೇಖರ ಶಿವಾಚಾರ್ಯರು, ಅಡ್ನೂರು-ಗದಗ ಬೃಹ್ಮಠದ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯರು, ನೀಲಗಲ್‌ಬೃಹನ್ಮಠದ ಶ್ರೀ ಅಭಿನವರೇಣುಕಶಾಂತಮಲ್ಲ ಶಿವಾಚಾರ್ಯರ, ಲಕ್ಷ್ಮೀಪುರ ಬೃಹ್ಮಠದ ಶ್ರೀಚನ್ನಮಲ್ಲ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು.

ತಾಲೂಕು ವೀರಶೈವಮಹಾಸಭಾ ಅಧ್ಯಕ್ಷ ಬಿ.ಎ.ಶಿವಶಂಕರ್, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಶ್ರೀಜಗದ್ಗುರು ರೇಣುಕಾಚಾರ್ಯಟ್ರಸ್ಟ್ ಖಜಾಂಚಿ ಯು.ಎಂ.ಬಸವರಾಜು, ಮೈಸೂರು ವೇದಮಾತಾ ಗುರುಕುಲದ ಸಂಸ್ಥಾಪಕ ವಿದ್ವಾನ ಡಾ.ಮಂಜುನಾಥ ಆರಾಧ್ಯ, ಗಾಳಿಹಳ್ಳಿಮಠದ ಗುರುಮೂರ್ತಯ್ಯ ಶಾಸ್ತ್ರಿ, ಕಾರ್ಯದರ್ಶಿ ವೇದಮೂರ್ತಿ, ಹೊನ್ನಾಳಿಯ ವೇ. ಮೂ.ವೀರೇಶಶಾಸ್ತ್ರಿ, ಮಂಡ್ಯದ ವೇ.ಮೂ.ಮಲ್ಲಿಕಾರ್ಜುನ, ವೇ.ಮೂ.ಮಧುಶಾಸ್ತ್ರಿ, ಹೊಸಳ್ಳಿಯ ವೇ.ಮೂ.ಗಿರೀಶಾರಾಧ್ಯ ವೇದಿಕೆಯಲ್ಲಿದ್ದರು.