ಚಾಮರಾಜನಗರ: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಕಲಬುರಗಿಯಲ್ಲಿ ಐದು ತಾಸು ದಿಗ್ಬಂಧನ ಹಾಕಿರುವುದು ಅತ್ಯಂತ ಖಂಡನೀಯವಾಗಿದ್ದು, ಕಾಂಗ್ರೆಸ್‌ನ ಗೂಂಡಾಗಳನ್ನು ಕೂಡಲೇ ಬಂಧಿಸಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡುಪ್ರಕಾಶ್ ಒತ್ತಾಯಿಸಿದರು.
ವಿಪಕ್ಷ ನಾಯಕ ಹುದ್ದೆಯು ಮುಖ್ಯಮಂತ್ರಿಯ ನೆರಳು ಇದ್ದಂತೆ. ಅವರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಕಲಬುರಗಿ ಪೊಲೀಸರು ಸಚಿವ ಪ್ರಿಯಾಂಕ್ ಖರ್ಗೆ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರನ್ನು ನಿಯಂತ್ರಣ ಮಾಡಿಲ್ಲ. ಈ ಹಿಂದೆ ನಾರಾಯಣಸ್ವಾಮಿ ಈ ಕುಟುಂಬದ ಅಕ್ರಮ ಬಯಲಿಗೆ ಎಳೆದಿದ್ದರು. ಕೆಐಎಡಿಬಿಯಿಂದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಅಕ್ರಮವಾಗಿ ಪಡೆದಿದ್ದ 5 ಎಕರೆ ಜಮೀನನ್ನು ವಾಪಸ್ ಕೊಡುವಂತೆ ಮಾಡಿದ್ದರು. ಅದರ ಸೇಡಿಗಾಗಿ ಸಚಿವ ಪ್ರಿಯಾಂಕ್ ಖರ್ಗೆ ನಾರಾಯಣಸ್ವಾಮಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸಂವಿಧಾನ ರಕ್ಷಣೆ ಮಾಡುತ್ತೇವೆ ಎಂದು ಬಾಯಿ ಬಡಿದುಕೊಳ್ಳುವ ಕಾಂಗ್ರೆಸ್ಸಿಗರು, ಕಲಬುರಗಿಯಲ್ಲಿ ಸಂವಿಧಾನ ವಿರೋಧಿ ಕೃತ್ಯ ಎಸಗಿದ್ದಾರೆ. ಜನಪ್ರತಿನಿಧಿ ಮೇಲೆ ಇಂತಹ ದೌರ್ಜನ್ಯ ನಡೆದ ಮೇಲೆ ಒಬ್ಬ ಕಾರ್ಯಕರ್ತರನ್ನು ಬಂಧಿಸಿಲ್ಲ. ಕೂಡಲೇ ನಾರಾಯಣಸ್ವಾಮಿ ಅವರಿಗೆ ದಿಗ್ಬಂಧನ ಹಾಕಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಬೇಕು. ಸಚಿವ ಪ್ರಿಯಾಂಕಾ ಖರ್ಗೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಸಹ ವಕ್ತಾರ ಮಂಜುನಾಥ್, ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಂಬಳ್ಳಿ ರಾಮಣ್ಣ, ಜಿಲ್ಲಾ ಮಾಧ್ಯಮ ಸಹ ಪ್ರಮುಖ್ ರಾಮಸಮುದ್ರ ಶಿವಣ್ಣ, ವೇಣುಗೋಪಾಲ್ ಹಾಜರಿದ್ದರು.