ಬೀದರ್: ಹಾನಗಲ್ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಚಲನಚಿತ್ರದ ಪೋಸ್ಟರ್ ಅನ್ನು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ನಗರದಲ್ಲಿ ಬಿಡುಗಡೆ ಮಾಡಿದರು.
ಹಾನಗಲ್ ಕುಮಾರ ಶ್ರೀಗಳು ಸ್ವಾಮೀಜಿಗಳ ತರಬೇತಿ ಕೇಂದ್ರ ಎನಿಸಿರುವ ಶಿವಯೋಗ ಮಂದಿರದ ಸ್ಥಾಪಕರು. ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥಾಪಕರು ಕೂಡ ಹೌದು. ಹತ್ತು ಹಲವು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ. ಅವರ ಜೀವನ ಚರಿತ್ರೆ ಆಧರಿಸಿ ಚಲನಚಿತ್ರ ನಿರ್ಮಿಸಿರುವುದು ಸಂತಸದ ಸಂಗತಿ ಎಂದು ಅವರು ಹೇಳಿದರು.
ಚಲನಚಿತ್ರದ ವ್ಯಾಪಕ ಪ್ರಚಾರ ಆಗಬೇಕು. ಎಲ್ಲರೂ ಕುಟುಂಬ ಸಮೇತರಾಗಿ ಚಲನಚಿತ್ರ ವೀಕ್ಷಿಸಬೇಕು. ಶ್ರೀಗಳ ಆದರ್ಶ ಜೀವನ ಹಾಗೂ ತತ್ವಗಳನ್ನು ಅರಿಯಬೇಕು ಎಂದು ತಿಳಿಸಿದರು.
ಬಿ.ಎಸ್. ಲಿಂಗದೇವರು ಅವರ ರಚನೆ ಮತ್ತು ನಿರ್ದೇಶನದಲ್ಲಿ ಸಮಾಧಾನ ಅವರು ಚಲನಚಿತ್ರ ನಿರ್ಮಾಣ ಮಾಡಿದ್ದಾರೆ. ಚಲನಚಿತ್ರ ಜ. 13 ರಂದು ಏಕಕಾಲಕ್ಕೆ ಎಲ್ಲೆಡೆ ಬಿಡುಗಡೆಯಾಗಲಿದೆ ಎಂದು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಹೇಳಿದರು.
ಹಲಬರ್ಗಾ-ಶಿವಣಿ-ಹೈದರಾಬಾದ್ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ, ಲಾಡಗೇರಿ ಹಿರೇಮಠದ ಗಂಗಾಧರ ಶಿವಾಚಾರ್ಯ, ಜಿಲ್ಲಾ ಸಾಮಾಜಿಕ ಅರಣ್ಯ ಅಧಿಕಾರಿ ಎ.ಬಿ. ಪಾಟೀಲ, ಉದ್ಯಮಿ ಶಿವಾನಂದ ಮಣಗೆ, ಪ್ರಮುಖರಾದ ನಾಗರಾಜ ಕರ್ಪೂರ, ಮಹಾಲಿಂಗ ಸ್ವಾಮಿ ಚಟ್ನಳ್ಳಿ ಮೊದಲಾದವರು ಇದ್ದರು.