ಜಿಲ್ಲೆ

ವಿಮ್ಸ್ ಬದಲು ಬಿಮ್ಸ್

ಬಳ್ಳಾರಿ : ವೈದ್ಯಕೀಯ ಸೇವೆ, ಶಿಕ್ಷಣದ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ವಿಮ್ಸ್), ಈಗ ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ(ಬಿಮ್ಸ್) ಹೆಸರಿನಡಿ ಬದಲಾವಣೆಯಾಗಲಿದೆ.
ವಿಮ್ಸ್ ಹೆಸರು ಬದಲಾಯಿಸುವ ಸಂಬಂಧ ಫೆಬ್ರವರಿಯಲ್ಲಿ ನಡೆದ ಗವರ್ನಿಂಗ್ ಕೌನ್ಸಿಲ್ ಸಭೆಯಲ್ಲಿ ಬಿಮ್ಸ್ ಎಂದು ಮರುನಾಮಕರಣಗೊಳಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಹೆಸರು ನೋಂದಾಣಿ ಮಾಡಿಸಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಹೆಸರು ಬದಲಾವಣೆ ಮಾಡಿ ಜು. 9 ರಂದು ಆದೇಶ ಹೊರಡಿಸಿದೆ. ವಿಮ್ಸ್ ಹೆಸರು ಬದಲಾವಣೆಯಿಂದ ವಿದ್ಯಾರ್ಥಿಗಳ ಪ್ರಮಾಣ ಪತ್ರಗಳು ಬದಲಾಗಬೇಕಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಲು ವಿಮ್ಸ್ ಆಡಳಿತ ಮಂಡಳಿ ಮುಂದಾಗಿದೆ. ಪ್ರಸ್ತಕ ಸಾಲಿನಲ್ಲಿ ವಿಮ್ಸ್‌ನ ನಾನಾ ಕೋರ್ಸ್‌ಗಳಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಬದಲಾದ ಹೆಸರಿನಲ್ಲಿ ಪ್ರಮಾಣ ಪತ್ರ ವಿತರಣೆಗೆ ಕ್ರಮಕೈಗೊಳ್ಳಬೇಕಿದೆ.