ಜಿಲ್ಲೆ

ವಿಮೆ ವಿತರಣೆಗೆ ವಿಳಂಬ ಮಾಡಬೇಡಿ

ನರೇಗಲ್ಲ: ಬೆಳೆ ವಿಮೆ ವಿತರಣೆ ಹಾಗೂ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಮಾಡಬೇಕು ಎಂದು ಆಗ್ರಹಿಸಿ ರೈತ ಸೇನಾ ವತಿಯಿಂದ ನರೇಗಲ್ಲ ರೈತ ಸಂಪರ್ಕ ಕೇಂದ್ರದ ಎದುರು ಸೋಮವಾರ ಕೆಲಕಾಲ ಪ್ರತಿಭಟನೆ ನಡೆಸಿ, ಕೃಷಿ ಅಧಿಕಾರಿ ವೀರಣ್ಣ ಗಡಾದ ಅವರಿಗೆ ಮನವಿ ಸಲ್ಲಿಸಲಾಯಿತು.

ರೈತ ಸೇನಾ ಮುಖಂಡ ಶರಣಪ್ಪ ಧರ್ವಯತ ಮಾತನಾಡಿ, ‘2017-18 ಹಾಗೂ 2019-20ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಜಮೆಯಾಗಿಲ್ಲ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಮಾರ್ಗಸೂಚಿ ಪ್ರಕಾರ ವಿಮೆಗೆ ಒಳಪಟ್ಟ ಬೆಳೆಗಳು ಕಟಾವು ನಂತರ ಮೂರು ತಿಂಗಳ ಒಳಗಾಗಿ ಬೆಳೆ ವಿಮೆ ಪಾವತಿಸಬೇಕು ಎಂಬ ನಿಯಮವಿದೆ. ಆದರೆ, ವರ್ಷಗಳೇ ಕಳೆದರೂ ಬೆಳೆ ವಿಮೆ ಜಮೆಯಾಗಿಲ್ಲ. ವಿಮಾ ಕಂಪನಿಗಳನ್ನು ಸಂರ್ಪಸಿದರೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಕೃಷಿ ಇಲಾಖೆ ಮಧ್ಯಸ್ತಿಕೆ ವಹಿಸಿ ಸಕಾಲದಲ್ಲಿ ವಿಮೆ ಮೊತ್ತ ರೈತರ ಕೈ ಸೇರುವಂತೆ ಮಾಡಬೇಕು’ ಎಂದರು.

ರೈತ ಚಂದ್ರು ಹೊನವಾಡ ಮಾತನಾಡಿ, ‘ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಬಿತ್ತನೆ ಮಾಡಲಾದ ಹೆಸರು ಬೆಳೆಗೆ ಪ್ರಾರಂಭದಿಂದ ಇಲಿ, ಮಿಡತೆ ಹಾಗೂ ಚಿಗರಿ ಹಾವಳಿಯಿಂದ ಬಹುತೇಕ ಬೆಳೆ ಹಾನಿಯಾಗಿದೆ. ಉಳಿದ ಅಲ್ಪಸ್ವಲ್ಪ ಬೆಳೆ ಕೈ ಸೇರಿದ್ದು, ಮಾರುಕಟ್ಟೆಯಲ್ಲಿ ದರ ಕುಸಿತ ಕಂಡಿದೆ. ಆದ್ದರಿಂದ, ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಸ್ಥಾಪಿಸಬೇಕು. ಬೆಳೆ ವಿಮೆ, ಹೆಸರು ಖರೀದಿ ಕೇಂದ್ರ ಸ್ಥಾಪನೆಗೆ 15 ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ ಎಂದರು.

ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೀರಣ್ಣ ಗಡಾದ ಮಾತನಾಡಿ, ‘2017-18 ಮುಂಗಾರಿನಲ್ಲಿ ಬಹುತೇಕ ರೈತರ ವಿಮೆ ಜಮೆಯಾಗಿದೆ. ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸೇರಿದಂತೆ ಇತರೆ ಮಾಹಿತಿಯಲ್ಲಿ ವ್ಯತ್ಯಾಸವಾದ ಕಾರಣ ರೈತರ ವಿಮೆ ಹಣ ಜಮೆಯಲ್ಲಿ ಅಡಚಣೆಯಾಗಿದೆ. 2019-20ರ ಮುಂಗಾರು ವಿಮೆ ಕರೊನಾ ಹಾಗೂ ಆಣೆವಾರಿ ವರದಿಯ ಕಾರಣದಿಂದ ವಿಳಂಬವಾಗಿದೆ. ಇನ್ನೊಂದು ಅಥವಾ ಎರಡು ತಿಂಗಳಲ್ಲಿ ವಿಮೆ ಜಮೆಯಾಗಲಿದೆ. ಜಮೆಯಾಗದ ರೈತರ ಯಾದಿ ನೀಡಿದಲ್ಲಿ ಪರಿಶೀಲನೆ ಕೈಗೊಳ್ಳಲಾಗುತ್ತದೆ ಎಂದರು.

ರೈತ ಸೇನಾ ಅಧ್ಯಕ್ಷ ಆನಂದ ಕೋಟಗಿ, ವೀರಪ್ಪ ಹತ್ತಿಕಟಗಿ, ಕಳಕಪ್ಪ ಮುಗಳಿ, ವೀರೇಶ ಹಿರೇಮಠ, ಹಾಲಪ್ಪ ಹಲಗೇರಿ, ಕಲ್ಲಪ್ಪ ಗೊಸಗೊಂಡ, ಮೊಯಿದ್ದಿನ್ ಬಾಳಿಕಾಯಿ, ರೈಮಾನಸಾಬ್ ಬಾಳಿಕಾಯಿ, ಗಂಗಯ್ಯ ಹಿರೇಮಠ, ಶಶಿಧರ ಓದಿಸೋಮಠ, ಸಂಗಯ್ಯ ಶಾಂತಯ್ಯನಮಠ ಇತರರಿದ್ದರು.