ಹುಬ್ಬಳ್ಳಿ: ಲಾಕ್ಡೌನ್ ಬಳಿಕ ಭಾರಿ ಇಳಿಮುಖಗೊಂಡಿದ್ದ ವಿಮಾನಯಾನ ಪ್ರಯಾಣಿಕರ ಸಂಖ್ಯೆಯಲ್ಲಿ ಚೇತರಿಕೆ ಕಂಡಿದ್ದು, ತನ್ಮೂಲಕ ವಿಮಾನಗಳ ಹಾರಾಟವೂ ಹೆಚ್ಚಾಗಿದೆ.
ಏಪ್ರಿಲ್ನಲ್ಲಿ ಲಾಕ್ಡೌನ್ ಸಲುವಾಗಿ ವಿಮಾನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಮೇನಲ್ಲಿ ವಿಮಾನ ಸಂಚಾರ ಪುನರಾರಂಭಗೊಂಡಿತಾದರೂ ಕೇವಲ 4 ವಿಮಾನ ಹಾರಾಟ ಮಾಡಿದ್ದವು. ಅದರಲ್ಲಿ 67 ಪ್ರಯಾಣಿಕರು ಮಾತ್ರ ಪ್ರಯಾಣಿಸಿದ್ದರು. ಜೂನ್ನಲ್ಲಿ 14 ವಿಮಾನ ಸಂಚರಿಸಿದ್ದು, 62 ಜನ ಪ್ರಯಾಣಿಸಿದ್ದರು. ಆಗಸ್ಟ್ನಲ್ಲಿ 85 ವಿಮಾನಗಳು ಸಂಚರಿಸಿದ್ದು, 2356 ಜನ ಪ್ರಯಾಣಿಸಿದ್ದರು. ಸೆಪ್ಟಂಬರ್ನಲ್ಲಿ 164 ವಿಮಾನಗಳ ಹಾರಾಟ ನಡೆದಿದ್ದು, ಮೂರು ಸಾವಿರಕ್ಕೂ ಅಧಿಕ ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದಕುಮಾರ ಠಾಕರೆ ತಿಳಿಸಿದ್ದಾರೆ.
ಕರೊನಾ ವೈರಸ್ ಹರಡುವ ಭೀತಿಯಿಂದ ಲಾಕ್ಡೌನ್ ನಂತರ ಆರಂಭದಲ್ಲಿ ಪ್ರಯಾಣಿಕರು ವಿಮಾನ ಸಂಚಾರಕ್ಕೆ ಹಿಂದೇಟು ಹಾಕಿದ್ದರು. ವಿಮಾನ ನಿಲ್ದಾಣ ಹಾಗೂ ವಿಮಾನಯಾನ ಸಂಸ್ಥೆಗಳು ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸಿದ ಕಾರಣ ಜನರು ಮತ್ತೆ ಗಗನ ಮಾರ್ಗದಲ್ಲಿ ಪ್ರಯಾಣ ಮಾಡತೊಡಗಿದ್ದಾರೆ.