ಬೆಳಗಾವಿ: ವಿಮಾನ ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ತಪಾಸಣೆ ಕೇಂದ್ರ ತೆರೆದಿರುವುದು ಸಂತಸದ ಸಂಗತಿ ಎಂದು ಗದಗ-ಡಂಬಳದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ವಿಜಯಾ ಆರ್ಥೋ ಆ್ಯಂಡ್ ಟ್ರಾಮಾ ಸೆಂಟರ್(ವಿಒಟಿಸಿ) ವತಿಯಿಂದ ಪ್ರಯಾಣಿಕರಿಗಾಗಿ ತೆರೆದಿರುವ ವೈದ್ಯಕೀಯ ತಪಾಸಣೆ ಕೊಠಡಿಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ವಿಮಾನದಲ್ಲಿ ಪ್ರಯಾಣಿಸುವವರು ಎರಡು ಗಂಟೆ ಮೊದಲೇ ನಿಲ್ದಾಣಕ್ಕೆ ಬರುತ್ತಾರೆ. ಈ ವೇಳೆ ಸಣ್ಣ-ಪುಟ್ಟ
ಆರೋಗ್ಯದ ತೊಂದರೆಗಳಿಗೆ ಚಿಕಿತ್ಸೆ ಪಡೆದುಕೊಳ್ಳು ಇಲ್ಲಿ ಅನುಕೂಲ ಕಲ್ಪಿಸಲಾಗಿದೆ. ವಾರದ ಏಳು ದಿನವೂ ಈ ಕೇಂದ್ರ ಕಾರ್ಯ ನಿರ್ವಹಿಸಲು ವ್ಯವಸ್ಥೆ
ಮಾಡಿರುವ ಡಾ. ರವಿ ಪಾಟೀಲ ಅವರ ಕಾರ್ಯ ಶ್ಲಾಘನೀಯ. ಯಾವ ಮನುಷ್ಯ ಸಾಮಾಜಸೇವೆ ಮಾಡುತ್ತಾನೆಯೋ ಅವನ ಬದುಕು ಸಾರ್ಥಕವಾಗುತ್ತದೆ. ಆ ಮಾರ್ಗದಲ್ಲಿ ಡಾ. ರವಿ ಪಾಟೀಲ ಸಾಗುತ್ತಿದ್ದಾರೆ ಎಂದರು.
ವಿಒಟಿಸಿ ವೈದ್ಯಕೀಯ ನಿರ್ದೇಶಕ ಡಾ. ರವಿ ಪಾಟೀಲ ಮಾತನಾಡಿ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೈದ್ಯಕೀಯ ಸೌಲಭ್ಯ ಸಿಗುತ್ತಿರಲಿಲ್ಲ. ವಿಮಾನ ನಿಲ್ದಾಣಕ್ಕೆ ವಯಸ್ಸಾದ ಪ್ರಯಾಣಿಕರು ಬರುತ್ತಾರೆ. ಎಲ್ಲ ಪ್ರಯಾಣಿಕರಿಗೆ ಉಚಿತವಾಗಿ ಪ್ರಾಥಮಿಕ ಹಾಗು ತುರ್ತು ಚಿಕಿತ್ಸೆ ನೀಡಲು ಈ ತಪಾಸಣಾ ಕೇಂದ್ರ ಆರಂಭಿಸಿದ್ದೇವೆ. ಇದನ್ನು ಸಾಮಾಜಿಕ ಕಾರ್ಯವಾಗಿ ಮಾಡುತ್ತಿದ್ದೇವೆ.
ಇದನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ವೈದ್ಯರನ್ನು ನೇಮಿಸಿದ್ದೇವೆ. ವಾರದ ಏಳು ದಿನವೂ ಇಲ್ಲಿ ವೈದ್ಯರು ಇರುತ್ತಾರೆ ಎಂದರು.
ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಮಾನ ನಿಲ್ದಾಣ ನಿರ್ದೇಶಕ ರಾಜೇಶಕುಮಾರ ಮೌರ್ಯ, ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರತಾಪ ದೇಸಾಯಿ, ವಕೀಲ ಬಸವರಾಜ ರೊಟ್ಟಿ, ಡಾ. ಸೋಮಶೇಖರ ಪೂಜಾರ ಇತರರಿದ್ದರು.