ಜಿಲ್ಲೆ

ವಿಮಾನ ನಿಲ್ದಾಣಕ್ಕೆ ರಾಯಣ್ಣ ಹೆಸರಿಡಿ

Dharwad

ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರ ಚನ್ನಮ್ಮ ಹೆಸರನ್ನು ಜ. 26ರೊಳಗೆ ಇಡಬೇಕು ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ.

ನಗರದಲ್ಲಿ ಶನಿವಾರ ಹಮ್ಮಿಕೊಂಡ ಸಂಗೊಳ್ಳಿ ರಾಯಣ್ಣರ 189ನೇ ಹುತಾತ್ಮ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು. ನಿಗದಿತ ಅವಧಿಯಲ್ಲಿ ಎರಡೂ ವಿಮಾನ ನಿಲ್ದಾಣಗಳಿಗೆ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಹೆಸರು ಇಡದಿದ್ದರೆ ಮುಖ್ಯಮಂತ್ರಿ ನಿವಾಸದ ಎದುರು, ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ವನಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ನಾಗೇಶ ಕಲಬುರ್ಗಿ, ಸ್ವಾತಂತ್ರ್ಯ ಹೋರಾಟಗಾರರನ್ನು ಬಿಜೆಪಿ ನೂರಾರು ವರ್ಷಗಳಿಂದ ಸ್ಮರಿಸುತ್ತ ಬಂದಿದೆ. ಈಗ ಎರಡೂ ವಿಮಾನ ನಿಲ್ದಾಣಗಳಿಗೆ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಹೆಸರಿಡುವಂತೆ ಒತ್ತಾಯಿಸುತ್ತದೆ ಎಂದರು.

ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಮಾತನಾಡಿ, ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮಿಯವರ ಹೆಸರಿಡಬೇಕು. 2 ವಿಮಾನ ನಿಲ್ದಾಣಗಳಿಗೆ ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಇಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಬೇಕು ಎಂದು ಆಗ್ರಹಿಸಿದರು.

ಸಂಗೊಳ್ಳಿ ರಾಯಣ್ಣ ಅವರ 189ನೇ ಹುತಾತ್ಮ ದಿನಾಚರಣೆಯನ್ನು ಜ. 26ರಂದು ಸಂಜೆ 4 ಗಂಟೆಗೆ ಆಚರಿಸಲಾಗುವುದು. ಈಗಾಗಲೇ ಪೂರ್ವಸಿದ್ಧತೆಗಳು ಭರದಿಂದ ಸಾಗಿವೆ. ಮಲ್ಲಕಂಬ ಪ್ರದರ್ಶನ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡುವುದು ಸೇರಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಕಾಂಗ್ರೆಸ್ ಮುಖಂಡ ಬಸವರಾಜ ಮಲಕಾರಿ ಮಾತನಾಡಿ, ವಿಮಾನ ನಿಲ್ದಾಣಗಳಿಗೆ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಹೆಸರಿಡಲು ಈ ಹಿಂದಿನ ಸಮ್ಮಿಶ್ರ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು ಎಂದರು. ಸಮಿತಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ತಾಲೂರ, ಯಲ್ಲಪ್ಪ ಕುಂದಗೋಳ, ಎಚ್.ಎಫ್. ಮುದಕಣ್ಣವರ, ನಾಗಪ್ಪ ದಳವಾಯಿ, ಕೆಬಿ. ಕುರಿ, ರಮೇಶ ನಲ್ವಡಿ, ರ್ಯಾವಪ್ಪ ಐರಾಣಿ, ಹನುಮಂತಪ್ಪ ಇಬ್ರಾಹಿಂಪುರ, ಮಲ್ಲಮ್ಮ ಬಳಗಾನೂರ, ನಾಗಪ್ಪ ರಾಣೋಜಿ ಇದ್ದರು.