ಜಿಲ್ಲೆ

ವಿಮಾನ ತಯಾರಿಸಿ ಹಾರಿಸಿದ ವಿನಾಯಕ

ಹುಬ್ಬಳ್ಳಿ: ಚಿಕ್ಕವರಿದ್ದಾಗ ರಿಮೋಟ್ ಕಾರ್, ಬೈಕ್ ಇತ್ಯಾದಿಗಳ ಬಗ್ಗೆ ಅತಿಯಾದ ಕ್ರೇಜ್ ಹೊಂದಿದ್ದ ಇವರಿಗೆ ಈಗ ರಿಮೋಟ್ ಬಳಸಿ ಸಣ್ಣ ವಿಮಾನಗಳನ್ನು ಹಾರಿಸುವ ಹವ್ಯಾಸ. ಅದು ಕೂಡ ಸ್ವತಃ ತಾವೇ ತಯಾರಿಸಿದ ವಿಮಾನ. ಇವರ ಪ್ಲೇನ್ ಹಾರಾಟದ ಗೀಳು ಈಗ ರಿಮೋಟ್ ಮೂಲಕ ಅಂದಾಜು ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಾರಿಸುವ ಚಾಕಚಕ್ಯತೆ ಇವರಲ್ಲಿ ಬೆಳೆಸಿದೆ.

ಹುಬ್ಬಳ್ಳಿಯ ಕೇಶ್ವಾಪುರ ಪಾರಸವಾಡಿ ನಿವಾಸಿ ವಿನಾಯಕ ಅಶೋಕಸಾ ಖಟವಟೆ ಅವರು ಪಿಯುಸಿಗೇ ಓದು ನಿಲ್ಲಿಸಿದರೂ ತಮ್ಮ ಹವ್ಯಾಸ ಹಾಗೂ ಆಲೋಚನೆಗಳನ್ನು ಮಾತ್ರ ನಿಲ್ಲಿಸಲಿಲ್ಲ. ತಂದೆ ಅಶೋಕಸಾ ಅವರೊಂದಿಗೆ ಮದ್ಯದಂಗಡಿಯಲ್ಲಿ ವ್ಯಾಪಾರ ನಡೆಸುತ್ತಲೇ ಹವ್ಯಾಸ ಮುಂದುವರಿಸಿದರು.

ಕಳೆದ ಮೂರು ವರ್ಷದಲ್ಲಿ ಆರೇಳು ಸಣ್ಣ ವಿಮಾನಗಳನ್ನು ಮಾಡಿ ಹಾರಿಸುವ ಮೂಲಕ ತಮ್ಮ ಕನಸುಗಳನ್ನು ಆಕಾಶದೆತ್ತರಕ್ಕೆ ಹರಿಬಿಟ್ಟಿದ್ದಾರೆ. ಇದಕ್ಕಾಗಿ ಇವರೇನು ತರಬೇತಿ ಪಡೆಯಲಿಲ್ಲ, ವಿಜ್ಞಾನವನ್ನೂ ಓದಲಿಲ್ಲ. ಆದರೂ ಇವರ ಆಲೋಚನೆಗಳು ಮಾತ್ರ ಆಕಾಶದೆತ್ತರಕ್ಕೆ ಬೆಳೆದವು.

ಅತ್ಯಂತ ಕಡಿಮೆ ಖರ್ಚಿನಲ್ಲಿ ಇವರು ವಿಮಾನ ತಯಾರಿಸಿದ್ದಾರೆ. ರಿಮೋಟ್, ಬ್ಯಾಟರಿ, ಹಾರ್ಡ್ ಥರ್ಮಕೋಲ್, ಕಟ್ಟಿಗೆ, ಅರಾಲ್ಡಿಟ್, ಗಮ್ ಇತ್ಯಾದಿಗಳನ್ನು ಬಳಸಿ ಅಂದಾಜು ಎರಡರಿಂದ ಮೂರು ಕೆಜಿ ತೂಕದ ವಿಮಾನಗಳನ್ನು ಹಾರಿಸಿ ನೋಡಿದ್ದಾರೆ. ವಿಮಾನ ಹಾರಿಸಲು ನಿರ್ಜನ ಪ್ರದೇಶ ಆಯ್ದುಕೊಂಡು ಎಲ್ಲ ಸುರಕ್ಷಾ ಕ್ರಮ ಕೈಗೊಂಡಿರುವುದಾಗಿ ಅವರು ಹೇಳುತ್ತಾರೆ.

ಇದೀಗ ನೈಟ್ರೋ ಇಂಜಿನ್ (ಐದು ಕೆಜಿ) ವಿಮಾನವನ್ನೂ ಸಿದ್ಧಪಡಿಸಿದ್ದು, ಹಾರಾಟಕ್ಕೆ ಸಜ್ಜಾಗಿದೆ. ಅಂದಾಜು 500 ಮೀಟರ್​ನಿಂದ ಕಿಲೋಮೀಟರ್ ವ್ಯಾಪ್ತಿಯಲ್ಲಿ ರಿಮೋಟ್ ಮೂಲಕ ನಿಯಂತ್ರಣ ಮಾಡುವ ವಿಮಾನಗಳು ಇವಾಗಿವೆ.

ಯಶಸ್ಸು ಏಕಾಏಕಿ ಸಿಕ್ಕಿಲ್ಲ:

ಸಣ್ಣ ವಿಮಾನ ತಯಾರಿಸಿದ ಕೂಡಲೆ ಯಶಸ್ಸು ಸಿಕ್ಕಿಲ್ಲ. ಇದಕ್ಕಾಗಿ ಬಹಳಷ್ಟು ಪರಿಶ್ರಮ ಪಟ್ಟಿದ್ದಾರೆ. ಮೊದಲು ಒಂದೆರಡು ಸಣ್ಣ ವಿಮಾನಗಳನ್ನು ಖರೀದಿಸಿ ಹಾರಿಸಿದರು. ಹೀಗೆ ಹಾರಾಟ ನಡೆಸುತ್ತಲೇ ತಾವೇ ಏಕೆ ವಿಮಾನ ಸಿದ್ಧಪಡಿಸಬಾರದು ಎಂಬ ಆಲೋಚನೆ ಬಂತು. ಒಂದೊಮ್ಮೆ ತರಿಸಿದ ವಿಮಾನ ದುರಸ್ತಿ ಮಾಡಿ ಪಡೆದ ಅನುಭವ ಹಾಗೂ ಆಸಕ್ತಿಯಿಂದ ವಿಮಾನ ತಯಾರಿಸಿಯೇ ಬಿಟ್ಟರು.

ಆರಂಭದಲ್ಲಿ ಒಂದೆರಡು ವಿಮಾನಗಳು ಕೈಕೊಟ್ಟವು. ನಷ್ಟವಾದರೂ ಆಸಕ್ತಿ ಕೈಬಿಡಲಿಲ್ಲ. ಮತ್ತೇ ಮತ್ತೆ ಪ್ರಯತ್ನ ಮಾಡಿ ಹಾರಾಟ ನಡೆಸುವವರೆಗೂ ಯಶಸ್ವಿಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ವಿಮಾನದತ್ತ ತಿರುಗಿದ ಇವರ ಹವ್ಯಾಸದಿಂದ ಡ್ಯೂಯೆಲ್ ಮೋಟರ್ ಪಿ1 ಚೇಜರ್, ಸಿ-1, 3ಡಿ 540 ಹೀಗೆ ಐದಾರು ರಿಮೋಟ್ ವಿಮಾನಗಳು ತಯಾರಾಗಿವೆ.

ರೆಡಿಮೇಡ್ ತೆಗೆದುಕೊಂಡರೆ ವೆಚ್ಚದಾಯಕ. ಹೇಗಿದ್ದರೂ ಒಂದೆರಡು ತರಿಸಿ ನೋಡಿದ್ದ ಅನುಭವ ಇತ್ತು. ಹಾಗಾಗಿ ಸ್ವತಃ ವಿಮಾನ ತಯಾರಿಸಿ ಹಾರಿಸುವ ಹವ್ಯಾಸ ಬೆಳೆಯಿತು. ‘ಮೊದಲು ಡಿಸೈನ್ ತಿಳಿದುಕೊಂಡೆ, ಹೇಗೆ ಹಾರುತ್ತದೆ ಎಂಬುದನ್ನು ಗಮನಿಸಿದೆ. ಕಡಿಮೆ ಖರ್ಚಿನಲ್ಲೂ ವಿಮಾನ ಮಾಡಬಹುದು ಎಂಬುದನ್ನು ಕಲಿತೆ. ಇದರಲ್ಲಿ ಇನ್ನಷ್ಟು ಸಂಶೋಧನೆಗಳನ್ನು ಮಾಡುವ ಆಶಯ ಇದೆ’ ಎನ್ನುತ್ತಾರೆ ವಿನಾಯಕ ಖಟವಟೆ.

‘ಸಣ್ಣವನಿದ್ದಾಗಿಂದಲೂ ಏನಾದರೂ ಚಟುವಟಿಕೆಯಿಂದಲೇ ಇರುವುದನ್ನು ರೂಢಿಸಿಕೊಂಡಿರುವ ನನ್ನ ಚಿಕ್ಕಮ್ಮನ ಮಗ ವಿನಾಯಕ ಈಗ ಸಣ್ಣ ವಿಮಾನ ಮಾಡಿರುವುದು ಕುಟುಂಬದ ಎಲ್ಲರಿಗೂ ಅತ್ಯಂತ ಸಂತೋಷ ತಂದಿದೆ. ಇದರಲ್ಲೇ ಅವರು ಇನ್ನಷ್ಟು ಸಂಶೋಧನೆ ಮಾಡಲಿ, ಅವರ ಸಾಧನೆ ಜನರಿಗೆ ನೆರವಾಗಲಿ’ ಎಂದು ಸಹೋದರ ಪಾಂಡುರಂಗ ಮೆಹರವಾಡೆ ಹೆಮ್ಮೆಯಿಂದ ಹೇಳುತ್ತಾರೆ.

ಉಪಯೋಗ ಏನು?

ಇದು ಜನರನ್ನು ಹತ್ತಿಸಿಕೊಂಡು ಹಾರಾಡಲಾರದು. ಆದರೆ, ಔಷಧ ಸಿಂಪಡಣೆ, ಕ್ಯಾಮರಾ ಅಳವಡಿಸಿ ನೆರೆ, ಆಪತ್ತು ಪ್ರದೇಶದಲ್ಲಿ ಸಿಲುಕಿದವರ ಪತ್ತೆ, ಅಂಥವರಿಗೆ ಆಹಾರ, ಔಷಧ ಪೂರೈಕೆ ಮಾಡಲು, ಅಗತ್ಯ ವಸ್ತುಗಳನ್ನು ಪೂರೈಸುವುದಕ್ಕೆ ಸಹಕಾರಿ ಆದೀತು. ಗಮ್ಯ ಸ್ಥಳಗಳಲ್ಲಿನ ಸ್ಥಿತಿ ಅರಿಯಲು ಬಳಸಬಹುದು. ಈ ಬಗ್ಗೆ ಬೇಡಿಕೆ ಬಂದರೆ ಅಂತಹ ವಿಮಾನ ಅಭಿವೃದ್ಧಿ ಪಡಿಸಬಹುದು ಎನ್ನುತ್ತಾರೆ ವಿನಾಯಕ.